ಅಥಣಿ: ಕಳೆದ ಹತ್ತು ದಿನಗಳಿಂದ ತಾಲೂಕಿನಲ್ಲಿಸುರಿಯುತ್ತಿರುವ ಅಕಾಲಿಕ ಮಳೆ ಚೆಂಡು ಹೂವು ಬೆಳೆಗಾರರಲ್ಲಿ ಆತಂಕವನ್ನು ಉಂಟುಮಾಡಿದೆ. ಅಥಣಿ ತಾಲೂಕು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿದ್ದು, ಇಲ್ಲಿ ಹೆಚ್ಚಾಗಿ ಚೆಂಡು ಹೂವು ಬೆಳೆಯಲಾಗುತ್ತಿದೆ. ಆದರೆ, ತಾಲೂಕಿನಲ್ಲಿ ಸುರಿದ ಮಳೆ ಆರ್ಭಟಕ್ಕೆ ಹೂವಿನ ಗಿಡಗಳು ನೆಲಕಚ್ಚಿದ್ದು, ಗಿಡದಲ್ಲೇ ಹೂ ಕೊಳೆಯುತ್ತಿದೆ. ಇದರಿಂದಾಗಿ ಹೂವು ಬೆಳೆಗಾರರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.
ಒಂದು ಎಕರೆ ಪ್ರದೇಶದಲ್ಲಿ ಚೆಂಡು ಹೂ ಬೆಳೆಯಲು ಅಂದಾಜು 30 ಸಾವಿರ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೆ, ಇದೀಗ ಹೂಡಿಕೆ ಮಾಡಿದ ಹಣ ಸಹ ವಾಪಸ್ ಬರುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಚೆಂಡು ಹೂ ಬೆಳೆ ಹಾನಿ: ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ಹೂವು ಮಾರಾಟವಾಗದೇ ವ್ಯಾಪಾರ ಕುಂಠಿತವಾಗಿತ್ತು. ಇದೀಗ ಮತ್ತೆ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಈಗಲಾದರೂ ಸರ್ಕಾರ ಸೂಕ್ತವಾದ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.