ಚಿಕ್ಕೋಡಿ(ಬೆಳಗಾವಿ): ದೊಣ್ಣೆಯಿಂದ ಹೊಡೆದು ಪತ್ನಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಪತಿರಾಯನೊಬ್ಬ ಪಾಪಪ್ರಜ್ಞೆ ಕಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ನಡೆದಿದೆ. ಬಾಳವ್ವ ಮುತ್ತಪ್ಪ ಬಿರಾಜ (30) ಪತಿಯ ದೊಣ್ಣೆ ಹೊಡೆತಕ್ಕೆ ಸಾವನ್ನಪ್ಪಿದ್ದರು.
ಪ್ರಕರಣ ಹಿನ್ನೆಲೆ: ಕಳೆದ ಮಂಗಳವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಮುತ್ತಪ್ಪ ಬಿರಾಜ್, ಪತ್ನಿ ಬಾಳವ್ವ ಬಳಿ ಸಾರಾಯಿ ಕುಡಿಯಲು ಹಣ ಕೇಳಿದ್ದಾನೆ. ಈ ವೇಳೆ ಆಕೆ ಹಣ ಕೊಡಲು ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದು ಕುಡಿದ ನಶೆಯಲ್ಲಿ ಪತ್ನಿಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.
ತಲೆಗೆ ಗಂಭೀರ ಪೆಟ್ಟುಬಿದ್ದು ಗಾಯಗೊಂಡಿದ್ದ ಬಾಳವ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಚೌಗಲಾ ಎಂಬುವರ ತೋಟದಲ್ಲಿರುವ ಮರವೊಂದಕ್ಕೆ ಮುತ್ತಪ್ಪ ಬಿರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆ್ಯಸಿಡ್ ದಾಳಿ ಕೇಸ್: ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳುತ್ತಿದ್ದ ನಾಗನಿಗೆ ಪೊಲೀಸರಿಂದ ಗುಂಡೇಟು