ಬೆಳಗಾವಿ: ಸವದತ್ತಿಯಲ್ಲಿರುವ ಮಲಪ್ರಭಾ (ನವೀಲುತೀರ್ಥ) ಜಲಾಶಯ ಬಹುತೇಕ ಭರ್ತಿಯಾಗಿದ್ದು, ಇಂದು ಎಲ್ಲ ನಾಲ್ಕೂ ಗೇಟ್ಗಳ ಮೂಲಕ 6000 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ ಎಂದು ನವೀಲುತೀರ್ಥ ಎಂಎಲ್‌ಬಿಸಿಸಿ ಅಧೀಕ್ಷಕ ಅಭಿಯಂತರರಾದ ಜಗದೀಶ್ ನಾಯಕ್ ತಿಳಿಸಿದ್ದಾರೆ.
ಮಲಪ್ರಭಾ ಜಲಾಶಯದ ಮಟ್ಟ 2075.00 ಅಡಿ ಇರುತ್ತದೆ. ಸದ್ಯಕ್ಕೆ 40 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 2079.50 ಆಗಿದ್ದು, ನದಿಯ ಒಳಹರಿವು ಹೆಚ್ಚಾದಂತೆ ಯಾವುದೇ ಕ್ಷಣದಲ್ಲೂ ನೀರು ಹೊರ ಬಿಡಲಾಗುವುದರಿಂದ ನದಿಪಾತ್ರದ ಜನರು ಮುಂಜಾಗ್ರತೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಧಾರಾಕಾರ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯ ಕೂಡ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತದೆ. ಆದ್ದರಿಂದ ಜಲಾಶಯದ ಕೆಳಭಾಗದ ಜನರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕೋರಿದ್ದಾರೆ.