ಬೆಳಗಾವಿ: ಜೀವನದಲ್ಲಿ ಸಾಕಷ್ಟು ಹಣ ಗಳಿಸಬಹುದು, ಆದ್ರೆ ವಿಶ್ವಾಸ ಗಳಿಸುವುದು ಬಹಳ ಕಷ್ಟ. ರಮೇಶ್ ಜಾರಕಿಹೊಳಿ ಅವರಿಂದ ನಾನು ಆ ವಿಶ್ವಾಸ ಗಳಿಸಿದ್ದೇನೆ ಎಂದು ಶಾಸಕ ಮಹೇಶ ಕುಮಟಳ್ಳಿ ಹೇಳಿದ್ದಾರೆ.
ನನ್ನ ಹಾಗೂ ಲಕ್ಷ್ಮಣ್ ಸವದಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಲಕ್ಷ್ಮಣ್ ಒಗ್ಗಟ್ಟಾಗಿದ್ದೇವೆ. ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಇಬ್ಬರೂ ಒಗ್ಗಟ್ಟಾಗಿ ಶ್ರಮಿಸುತ್ತೇವೆ. ಒಂದು ಮನೆತನದಲ್ಲಿ ನಾಲ್ಕು ಮಂದಿ ಅಣ್ಣತಮ್ಮಂದಿರಿದ್ದರೆ ಭಿನ್ನಾಭಿಪ್ರಾಯ ಇರುತ್ತೆ, ಆದ್ರೆ ನನ್ನ ಅಭಿಮಾನಿಗಳು, ಲಕ್ಷ್ಮಣ್ ಸವದಿ ಅಭಿಮಾನಿಗಳು ಒಂದೇ ರೀತಿ ಮಾತನಾಡ್ತಾರೆ ಎಂದು ಕುಮಟಳ್ಳಿ ಹೇಳಿದರು.
ಮುಂದಿನ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೆ ಒಂದು ಜವಾಬ್ದಾರಿ ನೀಡೋದಾಗಿ ಸಿಎಂ ತಿಳಿಸಿದ್ದಾರೆ. ನನಗೆ ಎಂಎಸ್‌ಐಎಲ್ ನಿಗಮ ಕೊಟ್ಟಿದ್ರು, ಸಿವಿಲ್ ಇಂಜಿನಿಯರ್ ಆಗಿದ್ದು ಲ್ಯಾಂಡ್ ಆರ್ಮಿ ಕೊಡಿ ಎಂದು ಕೋರಿದ್ದೇನೆ ಎಂದರು.
ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ಸರ್ಕಾರದಿಂದ ನಾಮನಿರ್ದೇಶನ ಮಾಡಿ ಅಂತ ನಾನು ಕೇಳಿಲ್ಲ. ನಾನು ಯಾವುದೇ ಸೊಸೈಟಿಯ ಸದಸ್ಯನಿಲ್ಲ, ಅಧ್ಯಕ್ಷನೂ ಇಲ್ಲ. ಡಿಸಿಸಿ ಬ್ಯಾಂಕ್ ಎಲೆಕ್ಷನ್ ಗೆ ನನಗೆ ನಿಲ್ಲೋಕೆ ಬರಲ್ಲ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿಗೆ ಬೆಂಬಲ ಕೊಡ್ತೇವೆ ಎಂದರು.