ಚಿಕ್ಕೋಡಿ: ಕೃಷ್ಣಾ ನದಿಯ ಸೇತುವೆಯ ಮೇಲಿನ ಮಣ್ಣನ್ನು ಸ್ವಚ್ಛ ಮಾಡಿ ಬೇರೆಡೆಗೆ ಹಾಕದೆ ನದಿಯ ನೀರಿಗೆ ಸುರಿದು ಕಲುಷಿತಗೊಳಿಸುತ್ತಿದ್ದಾರೆಂದು ಸಾಮಾಜಿಕ ಹೋರಾಟಗಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಕೃಷ್ಣಾ ನದಿ ಈ ಭಾಗದ ಜೀವನಾಡಿ. ಸೇತುವೆ ಮೇಲೆ ಬಿದ್ದಿರುವ ಮಣ್ಣನ್ನು ಸ್ವಚ್ಛ ಮಾಡಿ ಆ ಮಣ್ಣನ್ನು ನದಿಗೆ ಹಾಕುತ್ತಿರುವುದರಿಂದ ನದಿ ನೀರು ಕಲುಷಿತವಾಗುತ್ತಿದೆ. ಅಲ್ಲದೇ ಗುತ್ತಿಗೆದಾರ ಕೇವಲ ಒಬ್ಬ ವೃದ್ಧ ಕಾರ್ಮಿಕನಿಂದ ಕೆಲಸ ಮಾಡಿಸುತ್ತಿದ್ದು, ಈ ಕೆಲಸ ಕಾಟಾಚಾರಕ್ಕೆ ಮಾತ್ರ ನಡೆದಿದೆ ಎಂಬುದು ಮೆಲ್ನೋಟಕ್ಕೆ ಕಾಣುತ್ತದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿ ಸ್ವಚ್ಛಗೊಳಿಸಿದ ಮಣ್ಣನ್ನು ಬೇರೆಡೆಗೆ ಸಾಗಿಸಿ ನದಿಯ ನೀರಿನ ನೈರ್ಮಲ್ಯವನ್ನು ಕಾಯುವ ಅವಶ್ಯಕತೆ ಇದೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ಆಗ್ರಹಿಸಿದ್ದಾರೆ.