ಅಥಣಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶ ಜಲಾವೃತಗೊಂಡಿದೆ.
ಸುಮಾರು 148 ಕುಟುಂಬಗಳು ವಾಸವಾಗಿದ್ದ ಪ್ರದೇಶ ಸದ್ಯ ಜಲ ದಿಗ್ಬಂಧನಕ್ಕೆ ಒಳಗಾಗಿದೆ. ತಾಲೂಕು ಆಡಳಿತ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಇತ್ತ ಕಳೆದ ಬಾರಿ ಪ್ರವಾಹದಿಂದ ಕಂಗೆಟ್ಟಿರುವ ನದಿ ಪಾತ್ರದ ಜನರಿಗೆ ಮತ್ತೆ ಕೃಷ್ಣಾ ನದಿ ಅಪಾಯದ ಮಟ್ಟದಲ್ಲಿ ಹರಿದು ಪ್ರವಾಹದ ಭೀತಿ ಮೂಡಿಸಿದೆ.
ಕಳೆದ ಬಾರಿಯ ಪ್ರವಾಹದಿಂದ ಇನ್ನೂ ಚೇತರಿಕೆ ಕಂಡಿಲ್ಲ. ಬೆಳೆ, ಮನೆ ಹಾನಿ ಸಂಭವಿಸಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಇದುವರೆಗೆ ಸರ್ಕಾರ ಸರಿಯಾದ ರೀತಿಯಲ್ಲಿ ಪರಿಹಾರ ಬಿಡುಗಡೆ ಮಾಡಿಲ್ಲ. ಇದರ ಮಧ್ಯೆ ಕೊರೊನಾ ಜೊತೆ ಪ್ರವಾಹ ಭೀತಿ ಎದುರಾಗಿದೆ. ನಾವು ಎಲ್ಲಿ ಹೋಗಬೇಕೆಂದು ದಿಕ್ಕು ತೋಚುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಕೃಷ್ಣಾ ನದಿ ಭೋರ್ಗರೆದು ಹರಿಯುತ್ತಿದೆ. ಚಿಕ್ಕ ಚಿಕ್ಕ ಮಕ್ಕಳು, ಮಹಿಳೆಯರು, ಜಾನುವಾರುಗಳು ಹರಿಯುವ ನದಿಯಲ್ಲಿ ಬರುತ್ತಿರುವುದು ಎಂಥವರಿಗೂ ನಡುಕ ಹುಟ್ಟಿಸುತ್ತದೆ. ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಇಲ್ಲದೆ ಇರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ನಾವು ಸದ್ಯ ಬೀದಿ ಭಿಕಾರಿಗಳಂತೆ ಯಾವುದಾದರೂ ಸ್ಥಳದಲ್ಲಿ ವಾಸ ಮಾಡುವ ಸ್ಥಿತಿ ಎದುರಾಗಿದೆ. ನಮಗೆ ಸರ್ಕಾರ ಮೂಲ ಸೌಲಭ್ಯ ಒದಗಿಸಬೇಕೆಂದು ಅಳಲು ತೋಡಿಕೊಂಡರು.