ಬೆಳಗಾವಿ : ಸಚಿವ ಕೆ ಎಸ್ ಈಶ್ವರಪ್ಪನವರು ಹಿರಿಯ ಸಚಿವರು. ಈ ರೀತಿ ಬಹಿರಂಗ ಪತ್ರ ಬರೆಯಬಾರದಿತ್ತು. ನಾಲ್ಕು ಗೋಡೆ ಮಧ್ಯೆ ಚರ್ಚೆ ಆಗಬೇಕಿರುವ ವಿಷಯದ ಬಗ್ಗೆ ಈಶ್ವರಪ್ಪ ಪತ್ರ ಬರೆದಿದ್ದು ಸರಿಯಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸಿಎಂ ಬಿಎಸ್‌ವೈ ವಿರುದ್ಧ ರಾಜ್ಯಪಾಲರಿಗೆ ಕೆ ಎಸ್ ಈಶ್ವರಪ್ಪ ದೂರು ಸಲ್ಲಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಈಶ್ವರಪ್ಪ ಹಿರಿಯ ಸಚಿವರಿದ್ದಾರೆ. ಅವರು ಅನುದಾನ ಹಂಚಿಕೆ ತಾರತಮ್ಯ ವಿಚಾರದ ಕುರಿತು ಈ ರೀತಿ ಬಹಿರಂಗ ಪತ್ರ ಬರೆಯ ಬಾರದಿತ್ತು. ಏನೇ ಸಮಸ್ಯೆ ಇದ್ದರೂ ರಾಜ್ಯದ ಮುಖ್ಯಮಂತ್ರಿಗಳಿದ್ದಾರೆ. ಅವರ ನಾಯಕತ್ವದಲ್ಲೇ ನಾವೆಲ್ಲಾ ಹೊರಟಿದ್ದೇವೆ.
ಸಿಎಂ ಬಿಎಸ್‌ವೈ ಜೊತೆ ಸಮಾಲೋಚನೆ ಮಾಡಬಹುದಿತ್ತು. ಇದನ್ನು ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪಿಸಿ ಎಲ್ಲಾ ಸಚಿವರು ಸೇರಿ ಚರ್ಚಿಸಬೇಕಿತ್ತು. ಬಹಿರಂಗ ಪತ್ರ ಬರೆಯೋದು ಸರಿಯಲ್ಲ ಎಂದರು. ಸಿಎಂ ವಿರುದ್ಧದ ದೂರು ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಉಪ ಚುನಾವಣೆಯಲ್ಲಿ ಈ ವಿಷಯ ಚರ್ಚೆಗೂ ಬರುವುದಿಲ್ಲ. ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪ್ರಸ್ತಾಪಿಸಲು ಯಾವುದೇ ವಿಷಯ ಇರಲಿಲ್ಲ. ಬಿಜೆಪಿ, ಮೋದಿ, ನಮ್ಮ ಬಗ್ಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ, ಇಂತಹದ್ದೇನಾದರೂ ಇದ್ದರೆ ಅದನ್ನೇ ದೊಡ್ಡದು ಮಾಡ್ತಾರೆ ಎಂದರು.
ಇದನ್ನೂ ಓದಿ: ರಾಜ್ಯಪಾಲರಿಗೆ ಪತ್ರ: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಈಶ್ವರಪ್ಪ
ಉಪ ಚುನಾವಣೆ ಬಳಿಕ ರಾಜಕೀಯ ಬದಲಾವಣೆ ಎಂಬ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಬಿಎಸ್‌ವೈ ಸಿಎಂ ಆದಾಗಿನಿಂದ ಕಾಂಗ್ರೆಸ್ ನಾಯಕರು ಇದನ್ನೇ ಹೇಳುತ್ತಿದ್ದಾರೆ. ಈವರೆಗೂ ಏನೂ ಆಗಿಲ್ಲ, ಸಿಎಂ ಆಗಿ ಬಿಎಸ್‌ವೈ ಮುಂದುವರೆಯುತ್ತಾರೆ ಎಂದು ಶೆಟ್ಟರ್ ಹೇಳಿದರು.
ಏಪ್ರಿಲ್ 17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆ ಇಂದು ಬೈಲಹೊಂಗಲ, ಸವದತ್ತಿ, ರಾಮದುರ್ಗದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಡಿಸಿಎಂ ಗೋವಿಂದ ಕಾರಜೋಳ, ಉಮೇಶ್ ಕತ್ತಿ ಸೇರಿ ಹಲವರು ಪ್ರಚಾರಕ್ಕೆ ಬರುತ್ತಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತೇವೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮತದಾರರನ್ನು ಭೇಟಿಯಾಗಲಿದ್ದಾರೆ. ಈ ಪ್ರಚಾರ ಕಾರ್ಯ ಇದೇ ರೀತಿ ಮುಂದುವರೆಯತ್ತದೆ ಎಂದರು.