ಬೆಳಗಾವಿ: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿರುವ ಸಂಗತಿ ಮರೆಮಾಚಿದ್ದ ಆರೋಪದಡಿ 7 ಜನರ ವಿರುದ್ಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರದ ಆದೇಶ ಧಿಕ್ಕರಿಸಿದ ಹಿನ್ನೆಲೆ ಬೆಳಗಾವಿಯಲ್ಲಿ ದಾಖಲಾದ ಮೊದಲ ಪ್ರಕರಣ ಇದು. ಹಿರೇಬಾಗೇವಾಡಿ ಗ್ರಾಮದ ಯುವಕನೋರ್ವ ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ. ಆದರೆ ಸಭೆಯಲ್ಲಿ ಭಾಗಿಯಾಗಿದ್ದ ಸಂಗತಿಯನ್ನ ಯುವಕ ಮುಚ್ಚಿಟ್ಟಿದ್ದ. ಅಲ್ಲದೇ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳೆದುರು ಯುವಕನ ಬಗ್ಗೆ ಗ್ರಾಮದ ತಬ್ಲಿಘಿ ಜಮಾತ್ ಕಾರ್ಯದರ್ಶಿ ಹಾಗೂ ಕುಟುಂಬದ ಸದಸ್ಯರು ತಪ್ಪು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ತಪ್ಪು ಮಾಹಿತಿ ನೀಡಿದ ಯುವಕ, ಆತನ ಕುಟುಂಬದ ಸದಸ್ಯರು ಹಾಗೂ ತಬ್ಲಿಘಿ ಕಾರ್ಯದರ್ಶಿ ಸೇರಿ 7 ಜನರ ವಿರುದ್ಧ ಟಾಸ್ಕ್ ಫೋರ್ಸ್ ನೋಡಲ್ ಅಧಿಕಾರಿ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 7 ಜನರ ವಿರುದ್ಧ ಐಪಿಸಿ ಸೆಕ್ಷನ್ 143, 202, 270, 308 ಸಹಕಲಂ 149ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.