ಬೆಳಗಾವಿ : ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್ ಸಂಸ್ಥೆಗಳು ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದರೂ, ಅವರ ಆದೇಶವನ್ನು ಗಾಳಿಗೆ ತೂರಿ ರೈತರ ಟ್ರ್ಯಾಕ್ಟರ್ ತೆಗೆದುಕೊಂಡು ಹೋದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪ್ರವಾಹದಿಂದ ಕಂಗೆಟ್ಟ ನಿರಾಶ್ರಿತರಿಗೆ ಮತ್ತು ರೈತರಿಗೆ ಸಮರ್ಪಕ ಪರಿಹಾರ ಒದಗಿಸಿ ಎಂದು ರೈತರು ಎರಡು ದಿನಗಳ ಹಿಂದೆ ನಡೆಸಿದ ಅಹೋರಾತ್ರಿ ಧರಣಿಗೆ ಜಿಲ್ಲಾಡಳಿತ, ರೈತರಿಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಎಸ್. ಬಿ ಬೊಮ್ಮನಹಳ್ಳಿ ತಿಳಿಸಿದ್ದರು. ಮಂಗಳವಾರ ನಡೆದ ಬ್ಯಾಂಕ್ ಮತ್ತು ರೈತರ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಬ್ಯಾಂಕ್ ಮತ್ತು ಮೈಕ್ರೋ ಪೈನಾನ್ಸ್‌ಗಳು ಸಾಲ ತುಂಬುವಂತೆ ರೈತರನ್ನು ಒತ್ತಾಯಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಆದರೆ ಜಿಲ್ಲಾಧಿಕಾರಿ ಆದೇಶದ ಬೆನ್ನಲ್ಲೇ ನಗರದ ಪೈನಾನ್ಸ್ ಸಂಸ್ಥೆಯೊಂದು ಕಳೆದ ಐದು ತಿಂಗಳ ಸಾಲ ತುಂಬಿಲ್ಲವೆಂದು ರೈತರಿಗೆ ಧಮ್ಕಿ ಹಾಕಿ, ಟ್ರ್ಯಾಕ್ಟರ್ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ನಗರದ ರೈತ ರಾಮಪ್ಪಾ ರಂಕನಕೊಪ್ಪ ಮತ್ತು ಬಾಳಪ್ಪ ಮಿಸಿ ಎನ್ನುವವರು ನಗರದ ಪೈನಾನ್ಸ್ ಸಂಸ್ಥೆಯಲ್ಲಿ ಸಾಲ ಪಡೆದು, ಎಚ್.ಎಂ.ಟಿ ಟ್ರ್ಯಾಕ್ಟರ್ ಖರೀದಿಸಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತುಗಳನ್ನು ಕಟ್ಟುತ್ತಾ ಬಂದಿದ್ದ ಅವರು, ನೆರೆ ಪ್ರವಾಹದಿಂದ ಕಳೆದ ಐದಾರು ತಿಂಗಳಿನ ಕಂತು ಕಟ್ಟಿರಲಿಲ್ಲ. ಅದಕ್ಕೆ ಪೈನಾನ್ಸ್ ಸಂಸ್ಥೆ ರೈತರಿಗೆ ಒಂದು ನೋಟಿಸ್ ಕೂಡ ನೀಡದೇ ಮನೆಗೆ ಬಂದು ಟ್ರ್ಯಾಕ್ಟರ್ ಎಳೆದೊಯ್ದಿದ್ದಾರೆ.
ಮೂರು ಕಂತು ಬಾಕಿ ಇದ್ದು, ಅದನ್ನ ತುಂಬುತ್ತೇವೆ. ಟ್ರ್ಯಾಕ್ಟರ್ ಒಯ್ಯಬೇಡಿ ಎಂದು ತಡೆದ ರೈತರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ರೈತರು ಆರೋಪಿಸಿದ್ದಾರೆ. ಸಂಕಷ್ಪದಲ್ಲಿರುವ ರೈತರಿಗೆ ಸಾಲದ ಹೆಸರಲ್ಲಿ ಕಷ್ಟ ಕೊಡಬೇಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರೂ, ನಮಗೆ ಪೈನಾನ್ಸ್‌ಗಳು ಈ ರೀತಿ ತೊಂದರೆ ನೀಡುತ್ತಿದ್ದು ಜಿಲ್ಲಾಧಿಕಾರಿಗಳೇ ನಮಗೆ ನ್ಯಾಯ ಒದಗಿಸಬೇಕೆಂದು ಟ್ರ್ಯಾಕ್ಟರ್ ಕಳೆದುಕೊಂಡ ರೈತ ಮನವಿ ಮಾಡಿದ್ದಾರೆ.