ಬೆಳಗಾವಿ : ನಾನು ಒಂದು ರೂಪಾಯಿ ಯಾರಿಗೂ ಕೊಡದೇ, ಅರ್ಧ ಕಪ್ ಚಹಾ ಸಹ ಕುಡಿಸದೇ ಪಕ್ಷದ ವರಿಷ್ಟರು ನನಗೆ ಇಷ್ಟು ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಸಿಎಂ, ಸಚಿವರ ಪದವಿ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಎಂಎಲ್‌ಎ, ಸಿಎಂ ಸಂಸದೀಯ ಕಾರ್ಯದರ್ಶಿ ಸೇರಿ ರಾಜ್ಯದ ಹತ್ತಾರು ಹುದ್ದೆಗಳನ್ನ ನಾನು ಅನುಭವಿಸಿದ್ದೇನೆ ಎಂದಿದ್ದಾರೆ.
ಏಳೆಂಟು ಜವಾಬ್ದಾರಿ ಇದೆ. ಎರಡು ಜಿಲ್ಲೆಗಳ ಉಸ್ತುವಾರಿ ಸಚಿವನಾಗಿದ್ದೇನೆ. ಇಂದಿನವರೆಗೂ ಬಿಜೆಪಿ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷದ ಜವಾಬ್ದಾರಿ ನೀಡಿದೆ. ಹೆಚ್ಚಿನ ಜವಾಬ್ದಾರಿ ಇರೋದ್ರಿಂದ ಕೆಆರ್‌ಡಿಎಫ್‌ಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನಾನು ಒಂದು ರೂಪಾಯಿ ಯಾರಿಗೂ ಕೊಡದೇ, ಅರ್ಧ ಕಪ್ ಚಹಾ ಕುಡಿಸದೇ ನನಗೆ ಇಷ್ಟು ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.
ಯತ್ನಾಳ್ ಅವರು ಸುಳ್ಳು ಹೇಳುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಬಹಳ ದೊಡ್ಡವರು, ಅವರು ಏಕೆ ಹೇಳಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡೋದು ಸೂಕ್ತವಲ್ಲ. ಅವರನ್ನು ಕೇಳಿದರೆ ಗೊತ್ತಾಗುತ್ತದೆ, ಏಕೆ ಹೇಳಿದ್ರಿ? ಯಾರಿಗೆ ಕೊಟ್ಟರು? ಯಾರು ಅವರಿಗೆ ಆಫರ್ ಮಾಡಿದ್ರು ಅವರನ್ನೇ ಕೇಳಬೇಕು. ಸತ್ಯ-ಸುಳ್ಳು ನಾನು ಪರಿಶೀಲನೆ ಮಾಡೋಕೆ ಆಗಲ್ಲ ಎಂದು ಹೇಳಿದರು.
ಮಾತನಾಡುವ ಮುನ್ನ ಯೋಚಿಸಬೇಕಿದೆ : ಯತ್ನಾಳ್ ಅವರು ನಮ್ಮ ಸಮಾಜದ ಹಿರಿಯ ಮುಖಂಡರು. ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೆಲಸ ಮಾಡಿದಂತವರು. ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿ ವಿಚಾರ ಮಾಡಿ ಹೇಳಿಕೆ ಕೊಡಬೇಕು. ನಾವೆಲ್ಲರೂ ಕೂಡ ಅರಿತುಕೊಳ್ಳಬೇಕಾಗುತ್ತದೆ. ನಾನು 33 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ. ಏನು ಬೇಕಾದರೂ ಹೇಳಬಹುದು. ಆದರೆ, ಹೇಳೋದು ಸರಿಯಲ್ಲ. ಪಕ್ಷ ಎಲ್ಲವನ್ನೂ ಅವಲೋಕನ ಮಾಡುತ್ತದೆ. ಸರಿಯಾದ ಸಂದರ್ಭದಲ್ಲಿ ಸರಿಯಾದ ತೀರ್ಮಾನವನ್ನು ಪಕ್ಷ ತಗೆದುಕೊಳ್ಳುತ್ತದೆ. ಅವರ ವಿರುದ್ಧ ಕ್ರಮದ ಬಗ್ಗೆ ಹಿರಿಯ ನಾಯಕರು ಪ್ರತಿಕ್ರಿಯೆ ಕೊಡುತ್ತಾರೆ ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು.
ನಾನು ಸಿಎಂ ಸಂಸದೀಯ ಕಾರ್ಯದರ್ಶಿಯಾಗಿದ್ದೆ: ನಗರದಲ್ಲಿ ಅರವಿಂದ ಬೆಲ್ಲದ್‌ಗೆ ಸಚಿವ ಸ್ಥಾನ ತಪ್ಪಿಸಲು ಜಗದೀಶ್ ಶೆಟ್ಟರ್ ತಮ್ಮ ಆಪ್ತ ಮುನೇನಕೊಪ್ಪಗೆ ಸಚಿವ ಸ್ಥಾನ ನೀಡಿದ್ರು ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪರೋಕ್ಷವಾಗಿ ಯತ್ನಾಳ್ಗೆ ಸಕ್ಕರೆ ಸಚಿವರು ಟಾಂಗ್ ನೀಡಿದರು. ಅರವಿಂದ ಬೆಲ್ಲದ್ ನನ್ನ ಆತ್ಮೀಯ ಬಂಧುಗಳು, ನನ್ನ ಸ್ನೇಹಿತರು. ಅವರ ತಂದೆಯ ಜೊತೆ ನಾನು ಎಂಎಲ್‌ಎ ಆಗಿದ್ದವನು. ಅವರ ತಂದೆ ಇನ್ನು ಗಡಿನಾಡ ನಿಗಮ ಅಧ್ಯಕ್ಷರಾಗಿದ್ದಾಗ, ನಾನು ಸಿಎಂ ಸಂಸದೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಕಳೆದ 33 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಇದ್ದೇನೆ. ಅರವಿಂದ ಎಂಎಲ್‌ಎ ಆಗುವ ಪೂರ್ವದಲ್ಲೇ ನಾನು ಎಂಎಲ್‌ಎ ಆಗಿದ್ದೆ ಎಂದರು.
ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆ ಸಾಲ ಮರು ಪಾವತಿ ಕುರಿತು : ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪಕ್ಕೆ ಬೆಳಗಾವಿಯಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಪ್ರತಿಕ್ರಿಯೆ ನೀಡಿದ್ದು, ಅದು ನನಗೆ ಸಂಬಂಧಿಸಿಲ್ಲ. ರೈತರಿಗೆ ಸಂಬಂಧಿಸಿದ್ದಾಗಿದ್ದರೆ ಯಾರ ಮಾಲೀಕತ್ವದ ಕಾರ್ಖಾನೆ ಎಂದು ಚಿಂತನೆ ಮಾಡದೇ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇನೆ.
ಆದರೆ, ಅದು ನನಗೆ ಸಂಬಂಧಿಸಿದ ಇಲಾಖೆ ಅಲ್ಲ. ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದಿರಬಹುದು. ಅದು ಅವರ ಇಲಾಖೆಗೆ ಸಂಬಂಧಿಸಿದೆ. ಸಕ್ಕರೆ ಇಲಾಖೆಗೆ ಸಂಬಂಧಿಸಿದ್ದಿದ್ರೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಯಾರು ಮಾಲೀಕರಿದ್ದಾರೆ, ಯಾವ ಪಾರ್ಟಿಯವರಿದ್ದಾರೆ ನನಗೆ ಸಂಬಂಧವಿಲ್ಲ. ನಮಗೆ ಯಾರ ಫ್ಯಾಕ್ಟರಿ ಎಂಬುವುದು ಮುಖ್ಯವಲ್ಲ. ರೈತರ ಹಿತ ಕಾಪಾಡುವುದು ಸಕ್ಕರೆ ಇಲಾಖೆಯ ಕರ್ತವ್ಯ ಎಂದು ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು. ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡದೆ, ನಾನು ಯಾವುದೇ ಕಾಂಟ್ರವರ್ಸಿ ವಿಚಾರದ ಬಗ್ಗೆ ಹೇಳಿಕೆ ನೀಡಲ್ಲ ಎಂದರು.
ನಾ ಹಿಂದೂ ಅಂತಾ ಕೊಲೆ ಮಾಡಬೇಕೆಂಬುದು ಯಾವ ನ್ಯಾಯ?: ಬೆಂಗಳೂರಿನ ಸಾರಾಯಿಪಾಳ್ಯದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತು ರಾಜಕಾರಣಿಗಳ ವ್ಯವಸ್ಥೆಯಲ್ಲಿ ಹಿಂದೂ ಇರಬಹುದು, ಮುಸಲ್ಮಾನ ಇರಬಹುದು. ಈ ದೇಶದಲ್ಲಿ ವಾಸಿಸುವವರು ಅಣ್ಣ-ತಮ್ಮಂದಿರ ರೀತಿ ಬದುಕಬೇಕಾಗುತ್ತದೆ. ಹಿಂದೂ ಎಂಬ ಒಂದೇ ಕಾರಣಕ್ಕೆ ಅವನ ಹತ್ಯೆ ಮಾಡಬೇಕು ಎಂಬುವಂತಹದ್ದು ಸರಿಯಾದದ್ದಲ್ಲ. ಯಾವುದೇ ಸಮಾಜ ಇದ್ದರೂ ಕೂಡ ಆ ಸಮಾಜ ತಿದ್ದುಕೊಳ್ಳಬೇಕು. ನಾನು ಹಿಂದೂ ಇದೀನಿ ಅಂತಾ ಕೊಲೆ ಮಾಡಬೇಕೆಂಬುದು ಯಾವ ನ್ಯಾಯ, ಇದು ಸರಿಯಾದುದಲ್ಲ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಬಿಟ್ರೆ ಕಾಂಗ್ರೆಸ್ ನಲ್ಲಿರೋ ಎಲ್ಲರೂ ಗುಂಡಾಗಳೇ: ಶಾಸಕ ಯತ್ನಾಳ್ ಗುಟುರು