ಬೆಳಗಾವಿ: ಬೆಳಗಾವಿಯ ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ಗೆ ಪಟ್ಟು ಹಿಡಿದಿದ್ದು, ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ ಮಾಡಲಾಗಿದೆ. ಹಿಜಾಬ್ ಸಂಘರ್ಷ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಮುಂದಿನ ಆದೇಶದವರೆಗೂ ಕಾಲೇಜಿಗೆ ರಜೆ ಇರಲಿದೆ. ಈ ಬಗ್ಗೆ ಡಿಸಿ ಜೊತೆಗೆ ಚರ್ಚಿಸುವೆ. ಯಾವ ವಿದ್ಯಾರ್ಥಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಕಾಲೇಜು ಮರಳಿ ಪ್ರಾರಂಭವಾದ ಬಳಿಕ ಹೆಚ್ಚುವರಿ ತರಗತಿ ತಗೆದುಕೊಳ್ಳುತ್ತೇವೆ. ಸದ್ಯ ಯಾವ ಮಕ್ಕಳಿಗೂ ತೊಂದರೆಯಾಗಬಾರದು ಎಂದು ರಜೆ ಘೋಷಿಸುತ್ತಿದ್ದೇವೆ ಎಂದು ತಿಳಿಸಿದರು.
ತರಗತಿಯಿಂದ ಹೊರ ನಡೆದ ವಿದ್ಯಾರ್ಥಿನಿಯರು: ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿರುವ ಸಂಗತಿ ತಿಳಿಯುತ್ತಿದ್ದಂತೆ ಕಾಲೇಜಿನ ಪ್ರಾಚಾರ್ಯ ಡಾ.ಪ್ರಕಾಶ್ ಪಾಟೀಲ್ ತರಗತಿಗೆ ಭೇಟಿ ನೀಡಿ, ತರಗತಿ ನಡೆಯುವಾಗ ಹಿಜಾಬ್ ಧಾರಣೆಗೆ ಅವಕಾಶ ಇಲ್ಲ. ಹಿಜಾಬ್ ತೆಗೆದು ತರಗತಿಗೆ ಹಾಜರಾಗಿ ಎಂದು ಮನವಿ ಮಾಡಿದರು. ಹಿಜಾಬ್ ತೆಗೆಯಲು ಒಪ್ಪದ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಹೊರನಡೆದರು.
ಧರಣಿ ಕುಳಿತ ವಿದ್ಯಾರ್ಥಿನಿಯರು: ತರಗತಿಯೊಳಗೆ ಹಿಜಾಬ್ ಧಾರಣೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಕೆಲ ಹೊತ್ತು ಧರಣಿ ನಡೆಸಿದರು. ತರಗತಿ ವೇಳೆ ಬುರ್ಖಾ, ನಕಾಬ್ ತೆಗೆಯುತ್ತೇವೆ. ಆದರೆ, ಹಿಜಾಬ್ ತಗೆಯುವುದಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಾವು ಹಿಜಾಬ್ ತಗೆಯಲ್ಲ, ತರಗತಿಗೆ ಹಾಜರಾಗಲು ನಮಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಆವರಣದಲ್ಲಿ ವಿದ್ಯಾರ್ಥಿನಿಯರ ಚರ್ಚೆ: ಕಾಲೇಜ್ ಗೇಟ್ ಹೊರಗೆ ನಿಂತು ವಿದ್ಯಾರ್ಥಿನಿಯರು ಚರ್ಚೆ ನಡೆಸಿದರು. ಕೇವಲ ಓರ್ವ ವಿದ್ಯಾರ್ಥಿನಿ ಮಾತ್ರ ಕಾಲೇಜ್ ಒಳಗೆ ತೆರಳಿ ಪ್ರಾಂಶುಪಾಲರ ಜೊತೆ ಕೆಲ ಕಾಲ ಮಾತುಕತೆ ನಡೆಸಿದಳು. ಪರಿಸ್ಥಿತಿ ತಾರಕಕ್ಕೇರುತ್ತಿದ್ದಂತೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಯಿತು.
ಇದನ್ನೂ ಓದಿ: ಬೆಳಗಾವಿ: ಹಿಜಾಬ್ ಧರಿಸಿಯೇ ತರಗತಿ ಪ್ರವೇಶಕ್ಕೆ ಕಾಲೇಜು ವಿದ್ಯಾರ್ಥಿನಿಯರ ಪಟ್ಟು
ಪೊಲೀಸ್ ಭದ್ರತೆ: ಕಳೆದ ಎರಡು ದಿನಗಳಿಂದ ವಿದ್ಯಾರ್ಥಿನಿಯರು ಹಿಜಾಬ್ಗೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಎಪಿಎಂಸಿ ಠಾಣೆಯ ಸಿಪಿಐ ಮಂಜುನಾಥ ಹಿರೇಮಠ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿದ್ದು, ನಾಲ್ವರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸೇರಿ 10 ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.