ಬೆಳಗಾವಿ: ಬೆಳಗಾವಿಯ ಹೊರವಲಯ ಕಾಕತಿಯ ಖಾಸಗಿ ಹೋಟೆಲಿನಲ್ಲಿ ತಂಗಿದ್ದ ಹರಿಯಾಣ ಮೂಲದ ಮಹಿಳೆಯ ವಜ್ರದ ಬಳೆಗಳು ಕಳ್ಳತನವಾಗಿವೆ. ಕಾಕತಿ ಬಳಿಯ ಹೋಟೆಲ್‌ವೊಂದರ ಕೊಠಡಿಯಲ್ಲಿಟ್ಟಿದ್ದ 10 ಲಕ್ಷ ರೂ. ಮೌಲ್ಯದ ವಜ್ರದ ಬಳೆಗಳು ಕಳ್ಳತನವಾಗಿರುವ ಬಗ್ಗೆ ಮಹಿಳೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಮಹಿಳೆ ಹರಿಯಾಣದ ಕಂಪನಿಯೊಂದರ ಹೆಚ್ಆರ್ ವಿಭಾಗದ ಮುಖ್ಯಸ್ಥೆ ಆಗಿದ್ದಾರೆ. ಮಾರ್ಚ್ 15ರಂದು ಬೆಗ್ಗೆ 10ಕ್ಕೆ ಹೋಟೆಲ್‌ಗೆ ಬಂದು ಬ್ಯಾಗ್ ಇಟ್ಟು ನಂತರ ಕಾರ್ಯ ನಿಮಿತ್ತ ಹೊರಗಡೆಗೆ ತೆರಳಿದ್ದರು. ರಾತ್ರಿ 10.30ರ ಸುಮಾರಿಗೆ ಕೊಠಡಿಗೆ ಬಂದು ನೋಡಿದಾಗ ವಜ್ರದ ಬಳೆಗಳು ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ ಮೂರು ದಿನ ರಾಜ್ಯಾದ್ಯಂತ ಮಳೆ
ಬ್ಯಾಗ್ ಅನ್ನು ತೆರೆಯಲಾಗಿತ್ತು. ಟವೆಲ್ ಒದ್ದೆ ಆಗಿತ್ತು. ಬಾತ್‌ರೂಂನಲ್ಲಿನ ಶವರ್ ಬಳಸಲಾಗಿತ್ತು. ತಮ್ಮ ಕೊಠಡಿಗೆ ಯಾರೋ ಬಂದು ಹೋಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ಹೋಟೆಲ್ ಸಿಬ್ಬಂದಿಗೆ ಮಹಿಳೆ ಮಾಹಿತಿ ನೀಡಿದ್ದಾರೆ. ಹೋಟೆಲ್‌ನ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಒಬ್ಬ ಪುರುಷ ಮತ್ತು ಮಹಿಳೆ ಕೊಠಡಿ ಪ್ರವೇಶಿಸಿರುವುದು ಕಂಡು ಬಂದಿದೆ. ಗ್ರಾಹಕರೊಬ್ಬರಿಗೆ ನೀಡಿದ ಕೊಠಡಿಯನ್ನು ಬೇರೆ ಗ್ರಾಹಕರಿಗೆ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ. ಇನ್ನೂ ಈ ಬಗ್ಗೆ ಟ್ವೀಟ್ ಮಾಡಿಯೂ ಹೋಟೆಲ್ ವಿರುದ್ಧ ಛೀಮಾರಿ ಹಾಕಿದ್ದಾರೆ.