ಬೆಳಗಾವಿ : ಕಳಸಾ-ಬಂಡೂರಿ ಸೇರಿ ಎಲ್ಲ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಕಳಸಾ-ಬಂಡೂರಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಅಪ್ಪರ್ ಭದ್ರಾ ಸೇರಿ ಎಲ್ಲಾ ಯೋಜನೆ ಅನುಷ್ಠಾನಕ್ಕೆ ನಮ್ಮ ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
ಎರಡ್ಮೂರು ಯೋಜನೆಗಳ ಬಗ್ಗೆ ನೆರೆಯ ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರ, ತೆಲಂಗಾಣ ರಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಹಾಕಿದ್ದಾರೆ. ಹೀಗಾಗಿ, ನಮ್ಮ ಲೀಗಲ್ ಟೆಕ್ನಿಕಲ್ ಟೀಂ ಸಮರ್ಥವಾಗಿ ಎದುರಿಸಿ ನಮ್ಮ ಪಾಲಿನ ನೀರನ್ನು ಬಳಸುತ್ತೇವೆ ಎಂದರು.
ಕಳಸಾ-ಬಂಡೂರಿ, ಮಹದಾಯಿ ಯೋಜನೆಯಲ್ಲಿ ನಮಗೆ 13 ಟಿಎಂಸಿಗಿಂತ ಹೆಚ್ಚಿನ ನೀರು ಅಲೋಕೇಷನ್ ಆಗಿದೆ. 8 ಟಿಎಂಸಿ ನೀರು ಜಲ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. 5 ಟಿಎಂಸಿ ನೀರನ್ನು ಕುಡಿಯಲು ಬಳಸಲಾಗುತ್ತಿದೆ. ಎಲ್ಲ ಯೋಜನೆಗಳು ನಮ್ಮ ಮುಂದಿವೆ. ನೆರೆ ರಾಜ್ಯದವರು ಸುಪ್ರೀಂಕೋರ್ಟ್‌ನಲ್ಲಿ ಧಾವೆ ಹಾಕಿದ್ದು, ಸ್ವಲ್ಪ ವಿಳಂಬವಾಗುತ್ತಿದೆ.
ಅಂತಾರಾಜ್ಯ ಜಲವಿವಾದ ಸೂಕ್ಷ್ಮ ವಿಚಾರವಾಗುತ್ತದೆ. ಮಾತಿನ ಭರದಲ್ಲಿ ಏನಾದರೂ ತಪ್ಪು ಶಬ್ದ ಬಳಕೆಯಾದ್ರೆ ಅದು ನಮ್ಮ ರಾಜ್ಯದ ಹಿತ ಕಾಯೋದಿಲ್ಲ. ಹೀಗಾಗಿ, ಅದರ ಬಗ್ಗೆ ಹೆಚ್ಚು ನಾನು ಮಾತನಾಡೋದಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.