ಬೆಳಗಾವಿ/ಧಾರವಾಡ/ಕಲಬುರಗಿ : ಮೂರು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಬೆಳಗಾವಿಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಬಂದಿದೆ. ಹು-ಧಾರವಾಡ ಮತ್ತು ಕಲಬುರಗಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಸಂಬಂಧಿಸಿದಂತೆ ಮೀಸಲಾತಿ ಪ್ರಕಟಗೊಂಡಿದೆ. ಈ ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಯಲಿದೆ.
ಬೆಳಗಾವಿ ಪಾಲಿಕೆಯ ಮೇಯರ್ ಸ್ಥಾನ- ಸಾಮಾನ್ಯ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ(ಮಹಿಳೆ) ವರ್ಗಕ್ಕೆ ಮೀಸಲಾಗಿರುತ್ತದೆ. ಈ ಮೀಸಲಾತಿಗೆ ಅನುಗುಣವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸದರಿ ಚುನಾವಣಾ ದಿನಾಂಕವನ್ನು ನಗರಾಭಿವೃದ್ಧಿ ಇಲಾಖೆಯು ನಿಗದಿಪಡಿಸಲಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ ಸ್ಥಾನ ಹಿಂದುಳಿದ ವರ್ಗ 'ಎ' ಮತ್ತು ಉಪಮೇಯರ್ ಸ್ಥಾನ 'ಪರಿಶಿಷ್ಟ ಜಾತಿ' (ಮಹಿಳೆ) ವರ್ಗಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಸರ್ಕಾರದ ಆದೇಶದಲ್ಲಿ ತಿಳಿಸಿದ್ದರು.
ಕಲಬುರಗಿ ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ (ಮಹಿಳೆ) ಮತ್ತು ಉಪಮೇಯರ್ ಸ್ಥಾನ BCW ವರ್ಗಕ್ಕೆ ಮೀಸಲಾತಿ ನಿಗದಿಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರ 2021, ಜ.21ರಂದೇ ಆದೇಶ ಹೊರಡಿಸಿತ್ತು.
(ಬಿಜೆಪಿಗೆ ಸಿಹಿ.. ಎಂಇಎಸ್ ಪಾಲಿಗೆ ಕುಂದಾ ಕಹಿ.. ಬೆಳಗಾವಿಯಲ್ಲಿ ಯಶಸ್ವಿಯಾದ ಕಮಲಪಾಳಯದ ತಂತ್ರ!)