ಬೆಳಗಾವಿ: ಉತ್ತರ ಕರ್ನಾಟಕ ಭಾಗ ಭಾರೀ ಪ್ರವಾಹಕ್ಕೆ ತುತ್ತಾಗಿದ್ದು, ಜನ-ಜಾನುವಾರ ಸೇರಿದಂತೆ ಪ್ರವಾಹದ ರಕ್ಷಣಾ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದರು.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮೂರು ದಿನ ನಾನು ಬೆಳಗಾವಿಯಲ್ಲೇ ಇರುತ್ತೇನೆ. ಬೆಳಗಾವಿ ಜಿಲ್ಲೆಯ 106 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಜಿಲ್ಲೆಯ 22,682 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ. ಪ್ರವಾಹದಲ್ಲಿ ಒಟ್ಟು 6 ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಕರ್ತವ್ಯದಲ್ಲಿ ಮೃತಪಟ್ಟ ಕಿತ್ತೂರು ಠಾಣೆಯ ಪಿಎಸ್ಐ ವೀರಣ್ಣ ಲಟ್ಟಿ ಕುಟುಂಬಕ್ಕೆ ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ಹಾಗೂ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಲಾಗುವುದು ಎಂದರು.
ಇನ್ನು ಸುರಕ್ಷಾ ಕಾರ್ಯದಲ್ಲಿ 5 ಎನ್ಡಿಆರ್ಎಫ್ ತಂಡಗಳು, 8 ಸೇನಾ ತುಕಡಿ, ಪೊಲೀಸ್, ಅಗ್ನಿ ಶಾಮಕದಳ ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಗತ್ಯ ಬಿದ್ರೆ ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ಬಳಸಲಾಗುವುದು. ಎರಡು ಹೆಲಿಕಾಪ್ಟರ್ ರಕ್ಷಣೆಗೆ ಸಿದ್ಧವಾಗಿವೆ. ಅಗತ್ಯ ನಿರಾಶ್ರಿತರ ಕೇಂದ್ರ ತೆರೆಯಲಾಗಿದ್ದು, ಜನರಿಗೆ ಆಹಾರ, ಬಟ್ಟೆ, ಸಮರ್ಪಕ ಮೂಲ ಸೌಕರ್ಯ ವಿತರಿಸಲು ಸೂಚಿಸಲಾಗಿದೆ ಎಂದರು.
ಇನ್ನು ಕೃಷ್ಣಾ ನದಿಗೆ ನೀರು ಬಿಡುವ ವಿಚಾರವಾಗಿ ಮೊದಲೇ ಮಾಹಿತಿ ನೀಡುವಂತೆ ಮಹಾರಾಷ್ಟ್ರ ಸಿಎಂ ಹಾಹು ಅಲ್ಲಿನ ಅಧಿಕಾರಿಗಳ ಜೊತೆ ಎರಡು ಸಲ ಮಾತನಾಡಿದ್ದೇನೆ. ನಮ್ಮ ಅಧಿಕಾರಿಗಳು, ಜನರು ದೃತಿಗೆಡುವುದು ಬೇಡ. ರಕ್ಷಣಾ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಸೂಚನೆ ನೀಡಿದ್ದೇನೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವ ಎಲ್ಲಾರ ರಕ್ಷಣೆಗೆ ಆದ್ಯತೆ ಮೀರಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.