ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕಾಡು ಕೋಣವನ್ನು ಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಗ್ರಾಮದಲ್ಲಿ ಕಾಡುಕೋಣ ಕಾಣಿಸಿಕೊಂಡು ಭಯದ ವಾತಾವರಣ ಉಂಟು ಮಾಡಿತ್ತು.
ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿ ನೇತೃತ್ವದಲ್ಲಿ ಕಾಡು ಕೋಣ ಸೆರೆ ಹಿಡಿಯಲಾಗಿದೆ. ಗ್ರಾಮದಲ್ಲಿ ಇತ್ತೀಚೆಗೆ ಹುಲಿ ಬಂದಿದೆ ಎಂದು ಶಂಕೆ ವ್ಯಕ್ತವಾಗಿದ್ದು, ಹುಲಿ ಹುಡುಕಾಟದಲ್ಲಿ ಕಾಡುಕೋಣ ಪತ್ತೆಯಾಗಿದೆ. ಕೊನೆಗೆ ಹರಸಾಹಸಪಟ್ಟು ಗ್ರಾಮಸ್ಥರು, ಅರಣ್ಯ ಸಿಬ್ಬಂದಿ, ಅಧಿಕಾರಿಗಳು ಕಾಡುಕೋಣ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1.5 ಟನ್ ತೂಕದ ಬೃಹದಾಕಾರದ ಕಾಡುಕೋಣ ಕೋಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ರೈತರ ಬೆಳೆಗಳನ್ನು ನಾಶ ಪಡಿಸಿದ ಹಿನ್ನೆಲೆ, ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮೈಸೂರಿನ ಮೃಗಾಲಯದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬೆಳಗಾವಿ ಅರಣ್ಯ ಇಲಾಖೆ ಅರಣ್ಯಾಧಿಕಾರಿ ಅಂಥೋನಿ ಮರಿಯಪ್ಪ, ಮತ್ತು ಪ್ರಶಾಂತ್ ಗಾಣಿಗೇರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಸತತ ನಾಲ್ಕು ದಿನದವರೆಗೆ ಕಾರ್ಯಾಚರಣೆ ನಡೆಸಿ ಕಾಡು ಕೋಣ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ವೃದ್ಧನ ಹತ್ಯೆ: ಒಡಿಶಾ ಮೂಲದ ಆರೋಪಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಈ ಭಾಗದಲ್ಲಿ ಕಾಡುಕೋಣ ಕಾಣಿಸಿಕೊಳ್ಳುವುದು ಅಪರೂಪ. ಸುತ್ತ - ಮುತ್ತ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಡುಕೋಣ ಕಾಣಿಸಿಸುವುದಿಲ್ಲ. ಖಾನಾಪುರ ಕಾಡಿನಲ್ಲಿ ಕಾಡು ಕೋಣಗಳಿವೆ. ಆದರೂ ಅಥಣಿ ತಾಲೂಕಿನ ಬಯಲು ಸೀಮೆಯಲ್ಲಿ ಕಾಡುಕೋಣ ಬಂದಿರೋದು ಅಪರೂಪದ ಘಟನೆಯೆಂದು ಅಥಣಿ ಅರಣ್ಯ ಇಲಾಖೆ ಪ್ರಶಾಂತ್ ಗಾಣಿಗೇರ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡರು. ಸದ್ಯ ಕಾಡುಕೋಣ ಆರೋಗ್ಯವಾಗಿದ್ದು, ಮೈಸೂರು ಮೃಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು.