ಬೆಳಗಾವಿ: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿ ಇದ್ದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ಮಾಸ್ಕ್ ಹಾಕಿಕೊಳ್ಳದೇ ಗಣೇಶನ ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಖರೀದಿಸಲು ಜನರು ಮುಗಿಬೀಳುತ್ತಿದ್ದಾರೆ.
ಬೆಳಗಾವಿ ನಗರದ ಗಣಪತಿ ಗಲ್ಲಿ, ಗಾಂಧೀ ನಗರ, ಶನಿವಾರ ಕೂಟ, ಕಂಬಳಿ ಕೂಟ, ರವಿವಾರ ಪೇಟೆ, ಕ್ಯಾಂಪ್ ಪ್ರದೇಶ ಹಾಗೂ ಖಡೇಬಜಾರ್, ಅಶೋಕನಗರದ ಪುಷ್ಪಹರಾಜು ಕೇಂದ್ರ ಸೇರಿದಂತೆ ಬಹುತೇಕ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಯಾವುದೇ ಆತಂಕವಿಲ್ಲದೇ ಹೂವು, ಹಣ್ಣು ಖರೀದಿಸಲು ಮುಗಿ ಬೀಳುತ್ತಿದ್ದಾರೆ.
ಗಣೇಶ ಹಬ್ಬದ ನಿಮಿತ್ತ ನಿತ್ಯಕ್ಕಿಂತ ಇವತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಬಹುತೇಕ ಜನರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಯಾರೊಬ್ಬರೂ ಮಾಸ್ಕ್ ಹಾಕಿಕೊಳ್ಳದೇ, ಕನಿಷ್ಠ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಇತ್ತ ಜನರನ್ನು ನಿಯಂತ್ರಿಸಬೇಕಿದ್ದ ಬೆಳಗಾವಿ ಜಿಲ್ಲಾಡಳಿತ ಕೂಡ ದಿವ್ಯ ನಿರ್ಲಕ್ಷ್ಯ ವಹಿಸಿದೆ.
ಮಾರುಕಟ್ಟೆಯಲ್ಲಿ ಮಹಾನಗರ ಪಾಲಿಕೆಯ ಮಾರ್ಷಲ್‌ಗಳಿಲ್ಲ. ಇದರಿಂದ ಸಾರ್ವಜನಿಕರು ಗುಂಪು ಗುಂಪಾಗಿ ನಿಂತು ಹೂವು, ಹಣ್ಣು, ಅಲಂಕಾರಿಕ ವಸ್ತು, ಪೂಜಾ ಸಾಮಗ್ರಿಗಳು ಸೇರಿದಂತೆ ಗಣೇಶ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಜನರು ಬ್ಯುಸಿ ಆಗಿದ್ದು, ಕೋವಿಡ್ ಮೂರನೇ ಅಲೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಗಡಿ ಜಿಲ್ಲೆ ಆಗಿರೋದ್ರಿಂದ ಜನರು ಮುಂಜಾಗ್ರತಾ ಕ್ರಮವಹಿಸಿಕೊಳ್ಳಬೇಕಿದೆ. ಪುಟ್ಟ ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಜನರು ಹಬ್ಬದ ಸಂಭ್ರಮದಲ್ಲಿ ಮೈಮರೆಯದೇ ತಮ್ಮ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೋವಿಡ್ ನಿಯಮಗಳನ್ನು ಪಾಲಿಸಬೇಕಿದೆ.
ಇದನ್ನೂ ಓದಿ: 2019ರ ಚುನಾವಣೆ ವೇಳೆ ಪ್ರಧಾನಿ ಟ್ವಿಟರ್ ಬಳಸಿಕೊಂಡಿದ್ದು ಹೇಗೆ ಗೊತ್ತಾ?: ಇಲ್ಲಿದೆ ಅಧ್ಯಯನ ವರದಿ