ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಕಾಲೇಜಿನ ಹಿರಿಯ-ಕಿರಿಯ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮೆಡಿಕಲ್ ಕಾಲೇಜು ಚುನಾವಣೆ ವೈಷಮ್ಯದ ಹಿನ್ನೆಲೆಯಲ್ಲಿ ವಸತಿ ನಿಲಯದಲ್ಲಿ ಗಲಾಟೆ ನಡೆದಿದೆ. ಮೇ 4ರ ತಡರಾತ್ರಿ ಈ ಘಟನೆ ನಡೆದಿದ್ದು, ರಾಜಸ್ಥಾನ ಮೂಲದ ಅಂತಿಮ ವರ್ಷದ ವಿದ್ಯಾರ್ಥಿ ಮೇಲೆ 15 ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ 15 ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಸಸ್ಪೆಂಡ್ ಮಾಡಿದೆ.
ಘಟನೆಯಲ್ಲಿ ರಾಜ್ಯಸ್ಥಾನ ಮೂಲದ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿ ಬುರಾರಾಮ್ ಗೋಧರೆ ತೀವ್ರ ಗಾಯಗೊಂಡಿದ್ದಾರೆ. ತೀವ್ರ ಹಲ್ಲೆಯಿಂದ ಬುರಾರಾಮ್ ಅವರ ಮೂಗು, ಕಿರು ಬೆರಳಿಗೆ ಗಾಯಗಳಾಗಿವೆ. ಮೂಗಿನ ಶಸ್ತ್ರ ಚಿಕಿತ್ಸೆ ಸಲುವಾಗಿ ಬುರಾರಾಮ್ ರಾಜಸ್ಥಾನದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಬಿಮ್ಸ್ ನಿರ್ದೇಶಕರು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ: SDRF ನಿಂದ ಕ್ಯಾಂಟರ್ ಚಾಲಕನ ರಕ್ಷಣೆ
ಘಟನೆಗೆ ಕಾರಣ? ಮೇ 1ರಂದು ಬಿಮ್ಸ್ ಕಾಲೇಜಿನ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕೃಷ್ಣಾ ರಾಥೋಡ್ ಹಾಗೂ ಆತನ ತಂಡಕ್ಕೆ ಹಲ್ಲೆಗೊಳಗಾದ ಬುರಾರಾಮ್ ವಿರೋಧ ಮಾಡಿದ್ದರು. ಚುನಾವಣೆ ನಡೆದು ನಾಲ್ಕು ದಿನಗಳ ನಂತರ ಮಧ್ಯರಾತ್ರಿ ಬುರಾರಾಮ್ ರೂಮ್‌ಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಬರುತ್ತಿದ್ದಂತೆ ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಬಿಮ್ಸ್ ಆಡಳಿತಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಮಾಹಿತಿ ನೀಡಿದ್ದಾರೆ.