ಚಿಕ್ಕೋಡಿ: ಕೊರೊನಾದಿಂದ ರೈತರು ಅನೇಕ ತೊಂದರೆಗಳನ್ನು ಅನುಭವಿಸುವಂತಾಗಿದ್ದು, ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕಾಗವಾಡ, ಅಥಣಿ, ರಾಯಬಾಗ, ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ರೈತರು, ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸಿದ್ದಾರೆ.
ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಭರಮನಾಥ ಬೊರಗಾಂವೆ ಎಂಬ ರೈತ, ತಾನು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಲಾಗದೆ ಕಂಗಾಲಾಗಿದ್ದಾನೆ. ಬೆಳೆದು ನಿಂತ ಪಪ್ಪಾಯ, ಕಲ್ಲಂಗಡಿ ಹಾಗೂ ಹಲವಾರು ಬಗೆಯ ತರಕಾರಿಗಳು ಹಾಳಾಗಿವೆ. ಇದರ ಜೊತೆಗೆ ಲಾಕ್ಡೌನ್ ಎಫೆಕ್ಟ್ನಿಂದಾಗಿ ಒಂದು ತಿಂಗಳು ತಡವಾಗಿ ಪಪ್ಪಾಯ ನಾಟಿ ಮಾಡುತ್ತಿದ್ದು, ಮಳೆ ಬಂದರೆ ಬೆಳೆ ಹಾಳಾಗುತ್ತದೆ ಎಂಬ ಆತಂಕದಲ್ಲಿದ್ದಾನೆ.
ಕೊರೊನಾದಿಂದ ಮಹಾರಾಷ್ಟ್ರದಿಂದ ಬರುವ ಪಪ್ಪಾಯ ಸಸಿಗಳು ಒಂದು ತಿಂಗಳು ತಡವಾಗಿ ಬಂದಿವೆ. ಆದರೂ ಸಹಿತ ದೇವರ ಮೇಲೆ ಭಾರ ಹಾಕಿ ಪಪ್ಪಾಯ ಸಸಿಗಳನ್ನು ನಾಟಿ ಮಾಡುತ್ತಿದ್ದಾರೆ. ಏಪ್ರಿಲ್ ತಿಂಗಳಲ್ಲಿ ನಾಟಿ ಮಾಡಬೇಕಿದ್ದ ಸಸಿಗಳನ್ನು ಮೇ ತಿಂಗಳ ಅಂತ್ಯದಲ್ಲಿ ನಾಟಿ ಮಾಡುತ್ತಿದ್ದಾರೆ.
ಮುಂದಿನ ವಾರದಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಒಂದು ವೇಳೆ ಆಲಿಕಲ್ಲು ಮಳೆಯಾದರೆ ಇದೆಲ್ಲವೂ ಹಾಳಾಗಿ ಹೋಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಈಗಾಗಲೇ ಒಂದು ಎಕರೆ ಪಪ್ಪಾಯ ಬೆಳೆಯಲು ನಲವತ್ತು ಸಾವಿರ ಖರ್ಚು ಮಾಡಿದ್ದಾರೆ. ಕಳೆದ ಬಾರಿ ಈ ಪಪ್ಪಾಯ ಬೆಳೆಯಿಂದ ನಷ್ಟ ಅನುಭವಿಸಿದ್ದು, ಈ ಸಾರಿ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ ರೈತ ಭರಮನಾಥ ಬೊರಗಾಂವೆ.