ಚಿಕ್ಕೋಡಿ (ಬೆಳಗಾವಿ): ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದ ಪತ್ನಿ ಸೇರಿ ಐವರನ್ನು ಬಂಧಿಸಲಾಗಿದೆ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಚಿಂಚಲಿ ಪಟ್ಟಣದ ಬಾಳೇಶ ಶಿಕಾಂತ ಹಾರೂಗೇರಿ, ಸಚಿನ್ ಕುಮಾರ ಖೋತ, ಗೀತಾ ಕುಮಾರ ಖೋತ, ಬೆಳಕೂಡ ಗ್ರಾಮದ ಅಪ್ಪಾಸಾಬ ಜಿನ್ನಾಪ್ಪಾ ತಪಕಿರೆ ಹಾಗು ಸಂತೋಷ ನೇಮಿನಾಥ ತಪಕಿರೆ ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ:
ಮೇ 27ರಂದು ಅಪರಿಚಿತರು ನನ್ನ ಪತಿ ತಲೆ ಮತ್ತು ಸೊಂಟದ ಎಡಭಾಗಕ್ಕೆ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವವನ್ನು ಬಿಳಿ ಪ್ಲಾಸ್ಟಿಕ್ನಲ್ಲಿ ಕಟ್ಟಿ ಕೃಷ್ಣಾ ನದಿಯಲ್ಲಿ ಎಸೆದಿದ್ದಾರೆ ಎಂದು ಮೃತನ ಪತ್ನಿ ಗೀತಾ ಜೂನ್ 2ರಂದು ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ, ಮೃತ ಕುಮಾರ ರಾಮು ಖೋತನ ಪತ್ನಿ ಹಾಗು ಚಿಂಚಲಿ ಗ್ರಾಮದ ಬಾಳೇಶನ ನಡುವೆ ಅನೈತಿಕ ಸಂಬಂಧವಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ, ಮೇ 27ರಂದು ಮೃತನ ಪತ್ನಿ ಗೀತಾ ಪ್ರಿಯಕರ ಬಾಳೇಶನ ಜೊತೆಗೂಡಿ ತನ್ನ ಪತಿಗೆ ಮದ್ಯ ಕುಡಿಸಿ, ಆತನ ತಲೆಗೆ ಮತ್ತು ಎದೆಗೆ ಕಲ್ಲಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿರುವುದು ತಿಳಿದು ಬಂದಿದೆ. ಈ ಕೊಲೆಯಲ್ಲಿ ಆಕೆಯ ಮಗ ಸಚಿನ್ ಸೇರಿದಂತೆ ಒಟ್ಟು ಐವರು ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: ಲಾರಿ-ಬೈಕ್ ನಡುವೆ ಅಪಘಾತ: ಸವಾರ ಸ್ಥಳದಲ್ಲೇ ಸಾವು, ಮಹಿಳೆ ಗಂಭೀರ