ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಅಬ್ಬರ ಜೋರಾಗಿರುವುದರಿಂದ ಹೀಗಾಗಿ, ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಪರಿಣಾಮ ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಜಲಾವೃತಗೊಂಡಿವೆ.
ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ ಎಂಟು ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರ - ಕಲ್ಲೋಳ ಸೇತುವೆ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ- ಭೀವಶಿ, ಭೋಜ - ಕಾರದಗಾ, ಅಕ್ಕೋಳ-ಸಿದ್ನಾಳ, ನಾಗನೂರು-ಗೋಟೂರ, ಹುನ್ನರಗಿ-ಮಮದಾಪೂರ, ಭೋಜವಾಡಿ-ಕುನ್ನೂರ, ಮಲಿಕವಾಡ- ದತ್ತವಾಡ ಸೇತುವೆಗಳು ಮುಳುಗಡೆಯಾಗಿವೆ.
ಇದರಿಂದ 16 ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಜನರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ. ಕೃಷ್ಣಾ ನದಿಗೆ 70 ಸಾವಿರ ಕ್ಯೂಸೆಕ್ಗೂ ಹೆಚ್ಚು ಪ್ರಮಾಣದ ಒಳ ಹರಿವಿದೆ. ಕಲ್ಲೋಳ ಬ್ಯಾರೇಜ್‌ನಿಂದ 77,000ಕ್ಕೂ ಅಧಿಕ ಕ್ಯೂಸೆಕ್ ಹಾಗೂ ಹಿಪ್ಪರಗಿ ಬ್ಯಾರೇಜ್‌ನಿಂದ 74,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ನದಿ ತೀರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಇದನ್ನೂ ಓದಿ: ಸಾರ್ವಜನಿಕರೇ ಎಚ್ಚರ!.. ಅನ್ಲಾಕ್ ಬಳಿಕ ಹೆಚ್ಚಿದ ಮೊಬೈಲ್ ಕಳ್ಳತನ ಪ್ರಕರಣಗಳು