ಬೆಳಗಾವಿ : ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಪರಿಣಾಮ ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ರಾಕ್ಕಸಕೊಪ್ಪ ಜಲಾಶಯಶಗಳಲ್ಲಿ ನೀರಿನ ಸಂಗ್ರಹವಿದೆ. ಹೀಗಿದ್ದರೂ ಬೆಳಗಾವಿ ಮಹಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಬೆಳಗಾವಿ ನಗರದ ಅನೇಕ ಬಡಾವಣೆಯಲ್ಲಿ ಕಳೆದ 10 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಬೇಸಿಗೆ ಆರಂಭವಾಗಿದ್ದು, ನೀರು ಸಿಗದಿರುವುದಕ್ಕೆ ಜನರು ಕಂಗಾಲಾಗಿದ್ದಾರೆ. ಮಹಾನಗರ ಪಾಲಿಕೆಯಿಂದ ಟ್ಯಾಂಕರ್ ಮೂಲಕ ಕೆಲವು ಕಡೆ ನೀರು ಪೂರೈಕೆ ಮಾಡಲಾಗುತ್ತಿದೆ.
ನಗರಕ್ಕೆ ರಾಕಸಕೊಪ್ಪ, ಹಿಡಕಲ್ ಜಲಾಶಯದಿಂದ ನೀರು ಪೂರೈಕೆ ಆಗುತ್ತದೆ. ಎರಡೂ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಹೀಗಿದ್ದರೂ ಜನರಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ. ನೀರಿನ ಟ್ಯಾಂಕರ್‌ಗಳು ಬಡಾವಣೆಗಳಿಗೆ ಬರ್ತಿದ್ದಂತೆ ಜನರು ತಳ್ಳಾಡಿಕೊಂಡು ನೀರು ಸಂಗ್ರಹಿಸುತ್ತಿದ್ದಾರೆ. ನೀರಿಗಾಗಿ ಜನರು ವಾಗ್ವಾದ ಮಾಡುತ್ತಿದ್ದಾರೆ.
ಹೆಸ್ಕಾಂ ಯಡವಟ್ಟು : ಕಳೆದ 15 ದಿನಗಳಿಂದ ಹೆಸ್ಕಾಂ ನಗರದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಪರಿಣಾಮ ನಗರದ ಹಲವು ನೀರು ಸಂಗ್ರಹ ಘಟಕಗಳ ಪಂಪ್ ಸೆಟ್‌ಗಳಿಗೆ ಹಾನಿಯಾಗಿವೆ. ಹೀಗಾಗಿ, ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆಯ ಕಾಮಗಾರಿ ನಡೆಯುತ್ತಿದೆ. ಇದರ ಜವಾಬ್ದಾರಿ ಎಲ್ ಆ್ಯಂಡ್ ಟಿ ಕಂಪನಿ ವಹಿಸಿಕೊಂಡಿದೆ. ಪಂಪ್ ಸೆಟ್ ದುರಸ್ತಿ ಮಾಡಿ ನೀರು ಪೂರೈಕೆ ಮಾಡಬೇಕಿದ್ದ ಎಲ್ ಆ್ಯಂಡ್ ಕಂಪನಿ ಕೂಡ ಬೇಜವಾದ್ಬಾರಿ ಪ್ರದರ್ಶಿಸುತ್ತಿದ್ದು, ಈ ಅವಾಂತರಕ್ಕೆ ಕಾರಣವಾಗಿದೆ. ತಕ್ಷಣವೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ನಗರಕ್ಕೆ ನೀರು ಸರಬರಾಜು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗುತ್ತಿಗಾರು ಕಮಿಲ ಬಳ್ಪ ರಸ್ತೆ ಡಾಂಬರೀಕರಣ: ಜನರು, ಮತದಾರರಿಗೆ ಕೃತಜ್ಞತೆಯ ಬ್ಯಾನರ್!