ಬೆಳಗಾವಿ: ಗೋಕಾಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪದ ಬಗ್ಗೆ ಮಾತನಾಡಿದ್ದಾರೆ.
ಡಿಕೆಶಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಆರಂಭಿಸಿದರು. ಲಕ್ಷ್ಮಿ ಹೆಬ್ಬಾಳ್ಕರ್ ಸೀನಿಯರ್ ಆದ ಮೇಲೆ ಬೇಕಾದ್ರೆ ಅವರನ್ನು ಸಿಎಂ ಮಾಡಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಜಿಲ್ಲೆಯಲ್ಲಿ ನಾನು ಸೀನಿಯರ್ ಆಗಿದ್ದೆ. ಆದರೆ ಡಿಕೆಶಿ ನನ್ನ ತಲೆ ಮೇಲೆ ಆಕೆಯನ್ನು ಕುರಿಸಿದ್ರೆ ಒಪ್ಪಲು ಹೇಗೆ ಸಾಧ್ಯ ಎಂದು ರಮೇಶ್ ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಹೆಬ್ಬಾಳ್ಕರ್ಗೆ ಯಾವುದೇ ಸ್ಥಾನಮಾನ ಕೊಡಬಾರದು ಎಂದು ಷರತ್ತು ವಿಧಿಸಿದ್ದೆ. ಸಿದ್ದರಾಮಯ್ಯ, ಡಿಕೆಶಿ ಹಾಗೂ ಗುಂಡೂರಾವ್ ಸಮ್ಮುಖದಲ್ಲಿಯೇ ಈ ನಿರ್ಧಾರವಾಗಿತ್ತು. ಆದರೂ ಡಿಕೆಶಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಗಮ ಮಂಡಳಿಯನ್ನು ನೀಡಿದರು. ನಾನು ಸುಮ್ನೆ ಇದ್ರೆ ಶಾಸಕಿ ಹೆಬ್ಬಾಳ್ಕರ್ಗೆ ಸಚಿವ ಸ್ಥಾನವನ್ನೂ ಕೂಡ ಕೊಡುತ್ತಿದ್ದರು ಎಂದರು.
ಅನಿವಾರ್ಯವಾಗಿ ನಾನು ಪಕ್ಷ ಬಿಡುವ ನಿರ್ಧಾರ ಕೈಗೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿ ಆಗೋಕೆ ಡಿಕೆಶಿ ಅಷ್ಟೇ ಅಲ್ಲ ನಾವೂ ಕಾರಣ. ಹೆಬ್ಬಾಳ್ಕರ್ ಸಚಿವೆಯಾದ್ರೆ ಹೊಟ್ಟೆ ಕಿಚ್ಚುಪಡುವಷ್ಟು ಸಣ್ಣ ಮನುಷ್ಯ ನಾನಲ್ಲ. ಆಕೆಯ ಹಣೆಬರಹದಲ್ಲಿ ಇದ್ರೆ ಸಚಿವೆಯಾಗಲಿ ತೊಂದರೆ ಇಲ್ಲ. ಆದರೆ ಆಕೆಗಾಗಿ ದುಡಿದವರ ಬಗ್ಗೆ ಸ್ವಲ್ಪ ಚಿಂತೆ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷ ಡಿಕೆಶಿ ಕೈಯಲ್ಲಿದೆ, ನಂದೇ ರಾಜ್ಯ ಅನ್ನೋದು ಹೆಬ್ಬಾಳ್ಕರ್ ಮನಸ್ಸಿಗೆ ಬಂತು. ರಾಜಕಾರಣದಲ್ಲಿ ಯಾರು ದೊಡ್ಡವರು, ಸಣ್ಣವರು ಎಂಬುದು ತಿಳಿಯಲಿಲ್ಲ ಎಂದರು.