ಅಥಣಿ: ತಾಲೂಕಿನ ಖಿಳೇಗಾಂವ್ ಗ್ರಾಮದಲ್ಲಿ ದೇಸಿ ತಳಿಯ (Desi breed) ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿ ಆಶ್ಚರ್ಯ ಮೂಡಿಸಿದೆ. ಖಿಳೇಗಾಂವ್ ಗ್ರಾಮದ ಕುಮಾರ್ ಸದಾಶಿವ ತಗಲಿ ಎಂಬುವರಿಗೆ ಸೇರಿದ ಜವಾರಿ ಹಸು (ಕಿಲಾರಿ ಆಕಳು) (Khillari cattle) ಮೂರು ಕರುಗಳಿಗೆ ಜನ್ಮ ನೀಡಿದೆ. ಇದರಲ್ಲಿ ಒಂದು ಹೆಣ್ಣು ಮತ್ತೆರಡು ಹೋರಿ ಕರುಗಳು. ಮೂರು ಕರುಗಳು ಸಹ ಆರೋಗ್ಯವಾಗಿದ್ದು, ರೈತರ ಮೊಗದಲ್ಲಿ ಸಂತಸ ಮನೆಮಾಡಿದೆ.
ಈ ಕುರಿತು ಮಾತನಾಡಿದ ರೈತ ಕುಮಾರ, ಜರ್ಸಿ ಹಸುಗಳು ಎರಡು ಕರುಗಳಿಗೆ ಜನ್ಮ ನೀಡಿರುವುದನ್ನು ನೋಡಿದ್ದೇವೆ. ನಮ್ಮ ಜವಾರಿ ಆಕಳು ಮೂರು ಕರುಗಳನ್ನು ಹಾಕಿರುವುದು ತುಂಬಾ ಅಚ್ಚರಿ ಮೂಡಿಸಿದೆ.
ಮೂರು ಕರುಗಳು ಮತ್ತು ತಾಯಿ ಆಕಳು ಆರೋಗ್ಯವಾಗಿದೆ. ಕರುಗಳಿಗೆ ಸ್ವಲ್ಪ ಹಾಲಿನ ತೊಂದರೆಯಾಗುತ್ತಿದೆ. ಹಾಗಾಗಿ ಬೇರೆ ಹಸುವಿನ ಹಾಲು ನೀಡುತ್ತಿದ್ದೇವೆ. ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಕರುಗಳು ನೋಡಲು ಬರುತ್ತಿದ್ದಾರೆ ಎಂದು ಹೇಳಿದರು.
ದೇವರ ಪವಾಡ:
ಖಿಳೇಗಾಂವ್ ಗ್ರಾಮದಲ್ಲಿ ಸ್ವಯಂಭು ನಂದಿ ದೇವಾಲಯ ಇದೆ. ಜೊತೆಗೆ ಈ ಕರುಗಳು ಸೋಮವಾರ ಜನನವಾಗಿರುವುದರಿಂದ ಇದು ಬಸವೇಶ್ವರನ ಆಶೀರ್ವಾದ. ಹಾಗಾಗಿ ಸ್ವಲ್ಪವೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಇದು ದೇವರ ಪವಾಡ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.