ಬೆಳಗಾವಿ: ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೋತಿದೆ. ಅವರಿಗೆ ಮಾಡಲು ಕೆಲಸ ಇಲ್ಲದ ಕಾರಣ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಇಲ್ಲಸಲ್ಲದ ಗಾಳಿ ಸುದ್ದಿ ಹಬ್ಬಿಸಲಾಗುತ್ತಿದೆ. ಕಾಂಗ್ರೆಸ್ ಎಲ್ಲಾ ಕಡೆ ಸೋತಿರುವ ಕಾರಣ ನಮ್ಮ ವಿರುದ್ಧ ಆ ಪಕ್ಷದ ನಾಯಕರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದರು.
ಇನ್ನು ಸಚಿವ ಸಂಪುಟ ವಿಸ್ತರಣೆಯೂ ಆಗಬಹುದು, ಪುನಾರಚನೆಯೂ ಆಗಬಹುದು. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ನಾಯಕರ ಜತೆಗೆ ಚರ್ಚಿಸಿಯೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಂಪುಟ ವಿಸ್ತರಣೆ ಸಂಬಂಧ ಇನ್ನೂ ಸಮಯ ನಿಗದಿ ಆಗಿಲ್ಲ. ಆದರೆ ಶೀಘ್ರವೇ ಸಂಪುಟ ವಿಸ್ತರಣೆ ಆಗಲಿದೆ ಎಂದರು.
ಓದಿ: ಅರುಣ್ ಸಿಂಗ್ ಜೊತೆ ಚರ್ಚಿಸಿದ ಬಳಿಕವೇ ಸಂಪುಟ ವಿಸ್ತರಣೆ : ಸಿಎಂ ಬಿಎಸ್ವೈ
ತೇರದಾಳ ಶಾಸಕ ಸಿದ್ದು ಸವದಿ ಯಾವುದೇ ತಪ್ಪು ಮಾಡಿಲ್ಲ. ಮಹಿಳಾ ಸದಸ್ಯೆಯನ್ನು ಕಿಡ್ನಾಪ್ ಮಾಡಿದ್ದು ಕಾಂಗ್ರೆಸ್ ಮುಖಂಡರೇ. ಅವರ ವಿರುದ್ಧವೇ ಪ್ರಕರಣ ದಾಖಲಾಗಿದೆ. ಆದರೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿರುವುದು ಬೇಸರದ ಸಂಗತಿ ಎಂದರು.
ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸಿದ್ದು ನಾವೇ. ಇಲ್ಲಿ ಅಧಿವೇಶನ ನಡೆಸಿದ್ದು ಕೂಡ ನಾವೇ. ಕಳೆದ ವರ್ಷ ಪ್ರವಾಹದ ಕಾರಣ ಇಲ್ಲಿ ಅಧಿವೇಶನ ನಡೆಸಲು ಸಾಧ್ಯವಾಗಲಿಲ್ಲ. ಈ ಸಲ ಕೋವಿಡ್ ಕಾರಣ ಚಳಿಗಾಲದ ಅಧಿವೇಶನ ಬೆಂಗಳೂರಲ್ಲಿ ನಡೆಸುತ್ತಿದ್ದೇವೆ. ಕಾಂಗ್ರೆಸ್ ನಾಯಕರಿಗೆ ಟೀಕಿಸಲು ಬೇರೆ ವಿಷಯಗಳು ಸಿಗುತ್ತಿಲ್ಲ. ಹೀಗಾಗಿ ಇಂತಹ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದರು.