ಚಿಕ್ಕೋಡಿ : ಕೃಷ್ಣಾ ಮತ್ತು ದೂಧಗಂಗಾ ನದಿಗಳಿಗೆ ಬಂದಿರುವ ಪ್ರವಾಹ ಬಂದು ಇಳಿದು ಹೋದರೂ ಇಂದಿಗೂ ನದಿ ತೀರದ ಪ್ರದೇಶದಲ್ಲಿ ವಿಷ ಸರ್ಪಗಳ ಕಾಟ ಹೆಚ್ಚಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಇಷ್ಟು ದಿನ ಪ್ರವಾಹಕ್ಕೆ ಹೆದರಿದ್ದ ನದಿ ತೀರ ಗ್ರಾಮದ ಜನ, ಸದ್ಯ ವಿಷಕಾರಿ ಹಾವುಗಳಿಗೆ ಹೆದರಿ ಹೊಲ ಗದ್ದೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ನದಿ ತೀರದ ಸದಲಗಾ ಪುರಸಭೆ ಸದಸ್ಯ ಅಭಜೀತ ಪಾಟೀಲ್ ಎಂಬುವವರ ತೋಟದಲ್ಲಿ ಎರಡು ಎಂಟು ಅಡಿ ಉದ್ದದ ಹಾವುಗಳು ಪ್ರತ್ಯಕ್ಷವಾಗಿದ್ದು, ಸದ್ಯ ಅವುಗಳನ್ನು ಹಿಡಿದು ಸುರಕ್ಷಿತ ತಾಣಕ್ಕೆ ಬಿಡಲಾಗಿದೆ.
ಅಲ್ಲದೆ ಕೆಳದ 2-3 ದಿನಗಳ ಹಿಂದೆ ದೂಧಗಂಗಾ ಸಕ್ಕರೆ ಕಾರಖಾನೆಯ ಹತ್ತಿರ ಹಾವು ಕಡಿದು ಬಾಲಕಿಯೊರ್ವಳು ಸಾವನ್ನಪ್ಪಿದ ಘಟನೆ ಕೂಡಾ ನಡೆದಿತ್ತು, ಅದಲ್ಲದೆ ಯಕ್ಸಂಬಾ-ಅಂಕಲಿ ಮಾರ್ಗದಲ್ಲಿ ಸುಮಾರು 7-8 ಹಾವುಗಳು ತಿರುಗಾಡುತ್ತಿವೆ ಎಂದು ರೈತರು ತಿಳಿಸಿದ್ದಾರೆ.
ಪ್ರವಾಹ ನಿಂತಿದೆ ಆದ್ರೆ ನದಿಯ ದಂಡೆಯ ರೈತರಿಗೆ ಹಾವುಗಳ ಭೀತಿ ಮಾತ್ರ ತಪ್ಪಿಲ್ಲ. ಮೊಸಳೆಗಳ ಕಾಟದ ಜೊತೆಗೆ ಸರ್ಪಗಳ ಕಾಟವೂ ಹೆಚ್ಚಾಗಿದೆ. ಇನ್ನು ರೈತರು ಬೆಳೆದಿರುವ ಬೆಳೆ ಕಟಾವು ಹಂತಕ್ಕೆ ಬಂದಿದ್ದು ತಮ್ಮ ಹೊಲಗದ್ದೆಗಳಿಗೆ ಹೊಗಲು ಹೆದರುತ್ತಿದ್ದಾರೆ.