ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ₹4.41ಕೋಟಿ ವಂಚನೆ ಮಾಡಿದ್ದ ಆರೋಪಿಯನ್ನ ಬಂಧಿಸಿದ್ದ ಪೊಲೀಸರು ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ. ಮಹಾರಾಷ್ಟ್ರದ ಮುಂಬೈನ ಮಸ್ಕಾತಿ ಮಹಲ್ ನಿವಾಸಿ ಭವ್ಯಹರೇನ್ ದೇಸಾಯಿ ಬಂಧಿತ ಆರೋಪಿ. ಈತನನ್ನು ಕಳೆದ ಹತ್ತು ದಿನಗಳಿಂದ ಬೆಳಗಾವಿ ಸಿಇಎನ್ ಠಾಣೆಯ ಪೊಲೀಸರು ವಿಚಾರಣೆಗಾಗಿ 10ದಿನ ವಶಕ್ಕೆ ಪಡೆದುಕೊಂಡಿದ್ದರು. ಇಂದು ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಕೋರ್ಟ್ಗೆ ಹಾಜರುಪಡಿಸಿ ಮತ್ತೆ ಜೈಲಿಗೆ ಕಳುಹಿಸಿದ್ದಾರೆ.
ಬಂಧಿತ ಆರೋಪಿ ಬೆಳಗಾವಿ ನಗರದ ದೇಸೂರು ರಸ್ತೆಯಲ್ಲಿರುವ ಆಟೋಮೋಟಿವ್ ಬಸ್ ಆ್ಯಂಡ್ ಕೋಚ್ ಪೈವೇಟ್ ಲಿಮಿಟೆಡ್ ಮಾಲೀಕತ್ವದ ಪ್ರಕಾಶ ಚೂನಪ್ಪ ಸರ್ವಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ದೇಸಾಯಿ, ಸುಳ್ಳು ದಾಖಲೆ ಸೃಷ್ಟಿಸಿ, ಕಂಪನಿಯ ವಾಹನಗಳಿಗೆ ಸಂಬಂಧಿಸಿದಂತೆ ಹಲವು ಕಂಪನಿಗಳೊಂದಿಗೆ ವ್ಯವಹಾರ ನಡೆಸುವುದಾಗಿ ಆಡಳಿತ ಮಂಡಳಿಯವರನ್ನು ನಂಬಿಸಿದ್ದನು.
ಆಯಾ ಕಂಪನಿಗಳಿಗೆ ಹಣ ಸಂದಾಯ ಮಾಡುವುದಿದೆ ಅಂತಾ ಲೆಕ್ಕ ತೋರಿಸಿ, ತನ್ನ ಪರಿಚಯಸ್ಥರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ. ಹೀಗೆ ಹಲವು ಕಂಪನಿಗಳ ಹೆಸರಲ್ಲಿ ಬರೋಬ್ಬರಿ 4,41,95,041 ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ಪಡೆದು ಉದ್ಯೋಗ ನೀಡಿದ ಕಂಪನಿಗೆ ವಂಚನೆ ಮಾಡಿದ್ದ ಎಂದು ತಿಳಿದುಬಂದಿದೆ.
ಮುಂಬೈನಲ್ಲಿ ಬಂಧನ: ಈ ಬಗ್ಗೆ ಶಾಖೆಯ ಮುಖ್ಯಸ್ಥ ಪ್ರಕಾಶ ಚೂನಪ್ಪ ಸರ್ವಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದರಂತೆ ಭವ್ಯಹರೇನ್ ದೇಸಾಯಿಯ ವೀಸಾ ಹಾಗೂ ಪಾಸ್‌ಪೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಲಾಗಿತ್ತು. ವಿದೇಶಕ್ಕೆ ತೆರಳಲೆಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ ಏರ್ಪೋರ್ಟ್ ಪೊಲೀಸರು ಬೆಳಗಾವಿ ಠಾಣೆಗೆ ಮಾಹಿತಿ ನೀಡಿದ್ದರು.
ಮಾಹಿತಿಯಂತೆ ಬೆಳಗಾವಿ ಪೊಲೀಸರು ಮುಂಬೈಗೆ ಹೋಗಿ ಆತನನ್ನು ಬಂಧಿಸಿ 10ದಿನಗಳ ವಿಚಾರಣೆ ಅಡಿಯಲ್ಲಿ ಕಸ್ಟಡಿಗೆ ತೆಗೆದುಕೊಂಡಿದ್ದರು. 10ದಿನಗಳ ಕಾಲಾವಧಿ ಮುಗಿದ ಬೆನ್ನಲ್ಲೇ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವಕನ ಕೊಲೆ: ಶಾಹಿದ್ ಹೆಸರಿನ ಮೂವರು ಆರೋಪಿಗಳು ಪೊಲೀಸರ ವಶಕ್ಕೆ!