ಬೆಳಗಾವಿ : ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲಗೆ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಮಾಡಲಾದ ಭ್ರಷ್ಟಾಚಾರ ಆರೋಪದ ಕುರಿತು ವಿಚಾರಣೆಗೆ ಎಸಿಬಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಎಸಿಬಿ ಡಿವೈಎಸ್‌ಪಿ ಜೆ.ಎಂ.ಕರುಣಾಕರ ಶೆಟ್ಟಿ ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಅನುಮತಿ ಕೋರಿ ಪತ್ರ ಬರೆದಿದ್ದಾರೆ.
ಶಾಸಕ ಅಭಯ ಪಾಟೀಲ ಅವರ ವಿರುದ್ಧ ಭ್ರಷ್ಟಾಚಾರ ಆರೋಪದ ತನಿಖೆ ಪೂರ್ಣಗೊಂಡಿದೆ. ಅವರನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡಬೇಕು ಎಂದು ಪೂರ್ವಾನುಮತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಪ್ರಕರಣ?: ಶಾಸಕ ಭ್ರಷ್ಟಾಚಾರ ಎಸಗಿದ್ದಾರೆ. ಅಪಾರ ಆಸ್ತಿ ಕಬಳಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ 2012ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಪ್ರಕರಣ 2017ರಲ್ಲಿ ಎಸಿಬಿಗೆ ವರ್ಗಾವಣೆಯಾಗಿತ್ತು. ತನಿಖಾಧಿಕಾರಿಗಳು ತಕ್ಷಣವೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಬೇಕು ಎಂದು ಹೈಕೋರ್ಟ್ ಎಸಿಬಿ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿದ್ದಾರೆ. ಶಾಸಕ ಅಭಯ್ ಅವರನ್ನು ವಿಚಾರಣೆಗೆ ಒಳಪಡಿಸಲು ಸ್ಪೀಕರ್ ಬಳಿ ಅನುಮತಿ ಕೋರಿದ್ದಾರೆ. ಜೂನ್ 20 ಕ್ಕೆ ಪತ್ರ ಬರೆಯಲಾಗಿದ್ದು, ಈವರೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ : ಜಿಎಸ್ಟಿ ಸಭೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ಸಿಎಂ ಬೊಮ್ಮಾಯಿ