ಬೆಳಗಾವಿ: ಇಡೀ ಭಾರತವೇ ಬೆಳಗಾವಿಯಲ್ಲಿದೆ. ಜಿಲ್ಲೆಯಲ್ಲಿ ಬಹುಭಾಷಿಕರು ನೆಲೆಸಿದ್ದಾರೆ. ಇಲ್ಲಿನ ಜನ ಕನ್ನಡನಾಡಿನ ಬಗ್ಗೆ, ರಾಷ್ಟ್ರದ ಬಗ್ಗೆ ಅಭಿಮಾನ ಇದ್ದವರು. ಸಂಕುಚಿತ ಭಾವನೆಯ ಮನಸ್ಸಿನವರಿಗೆ ಇಲ್ಲಿ ಜಾಗವಿಲ್ಲ ಎಂದು ಮಹಾರಾಷ್ಟ್ರ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದರು.
ನಗರದಲ್ಲಿ ಇ-ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಂದಾನಗರಿಯನ್ನು ಬಣ್ಣಿಸುವುದರ ಜೊತೆಗೆ ಮಾಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಟಾಂಗ್ ನೀಡಿದರು.
ಬೆಳಗಾವಿಯ ಗೌರವ ಹೆಚ್ಚಿಸುವ ಕೆಲಸವನ್ನು ನಾವು ಮಾಡುತ್ತೇವೆ. ಗಡಿಭಾಗದ ಶ್ರೇಯೋಭಿವೃದ್ದಿಗೆ ನಮ್ಮ ಸರ್ಕಾರ ಕಂಕಣಬದ್ಧವಾಗಿದೆ. ಸಂಕುಚಿತ ಭಾವನೆಯ ಮನಸ್ಸಿನವರಿಗೆ ಇಲ್ಲಿ ಜಾಗವಿಲ್ಲ ಎಂಬುದನ್ನು ಪಾಲಿಕೆ ಚುನಾವಣೆಯಲ್ಲಿ ನಗರವಾಸಿಗಳು ತೋರಿಸಿದ್ದಾರೆ. ಜಾತ್ಯತೀತ, ಭಾಷಾತೀತವಾಗಿ ಕೆಲಸ ಮಾಡಿ ಎಂದು ಪಾಲಿಕೆ ನೂತನ ಸದಸ್ಯರಿಗೆ ಸಿಎಂ ಕರೆ ನೀಡಿದರು.
ಇದನ್ನೂ ಓದಿ: ತಾನು ಬೆಳೆದ ಬೆಳೆ ಸಮೇತ ಸಿಎಂ ಭೇಟಿಗೆ ಆಗಮಿಸಿದ ಬೆಳಗಾವಿ ರೈತ - ಕಾರಣ?
ಶಾಸಕರಾದ ಅಭಯ್ ಪಾಟೀಲ್ ಹಾಗೂ ಅನಿಲ್ ಬೆನಕೆ ಅವರು ಡಬಲ್ ಇಂಜಿನ್ ಇದ್ದಂಗೆ. ಅವರಿಬ್ಬರು ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಉಭಯ ನಾಯಕರು ನನ್ನ ಜೊತೆಗೆ ಜಗಳವಾಡಿ ಯೋಜನೆಗಳನ್ನು ನಗರಕ್ಕೆ ತರುತ್ತಿದ್ದಾರೆ. ಬೆಳಗಾವಿ ಜಿಲ್ಲೆಯು ನಾಯಕರಿಂದ ಕೂಡಿರುವ ಜಿಲ್ಲೆ. ಸಚಿವ ಉಮೇಶ್ ಕತ್ತಿ ಉದ್ಯಮಿ ಹಾಗೂ ರಾಜಕಾರಣಿಯೂ ಹೌದು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಚಿವ ಗೋವಿಂದ ಕಾರಜೋಳರ ಪಾತ್ರ ದೊಡ್ಡದಿದೆ ಎಂದು ಸಿಎಂ ಬಣ್ಣಿಸಿದರು.
ಎಲ್ಲಾ ಮಹಾನಗರಗಳಲ್ಲಿ ಇ-ಗ್ರಂಥಾಲಯ
ದೇಶಪ್ರೇಮಿ ರವೀಂದ್ರ ಕೌಶಿಕ್ ಹೆಸರಲ್ಲಿ ಬೆಳಗಾವಿಯಲ್ಲಿ ನಿರ್ಮಾಣಗೊಂಡಿರುವ ಇ-ಗ್ರಂಥಾಲಯ ಮಾದರಿಯಾಗಿದೆ. ಓದುಗರಿಗೆ ಇದರಿಂದ ಅನುಕೂಲ ಆಗಲಿದೆ. ಮನುಷ್ಯನಿಗೆ ಜ್ಞಾನ, ಧ್ಯಾನ ಎರಡೂ ಮುಖ್ಯವಾಗಿ ಬೇಕು. ಜ್ಞಾನವೃದ್ಧಿಗೆ ಇ-ಗ್ರಂಥಾಲಯ ಪ್ರಮುಖ ಪಾತ್ರ ನಿರ್ವಹಿಸಲಿದೆ. ಬೆಳಗಾವಿ ಮಾದರಿಯಂತೆಯೇ ಎಲ್ಲಾ ಮಹಾನಗರ ಪಾಲಿಕೆಯಲ್ಲಿ ಇ-ಗ್ರಂಥಾಲಯ ಸ್ಥಾಪನೆಗೆ ಕ್ರಮ ವಹಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.