ಬೆಂಗಳೂರು: ಮೇಕೆದಾಟು ಯೋಜನೆ ಕುರಿತು ನಾವು ಸರ್ವ ಪಕ್ಷ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಪ್ರತಿಯಾಗಿ ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ಕಾನೂನು ಬಾಹಿರ ನಿರ್ಣಯ ಕೈಗೊಳ್ಳಲಾಗಿದೆ. ಇದೊಂದು ಪೊಲಿಟಿಕಲ್ ಸ್ಟಂಟ್ ಅಷ್ಟೇ. ನಾವು ಸರ್ವಪಕ್ಷ ಸಭೆಯಲ್ಲಿ ತೀರ್ಮಾನವಾದಂತೆ ಡಿಪಿಆರ್ ಪಡೆದುಕೊಳ್ಳುತ್ತೇವೆ. ಯೋಜನೆಗೆ ಬೇಕಾದ ಎಲ್ಲ ಕ್ರಮಗಳನ್ನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳವಾಗಿದೆ. ಇದು ಇಂದಿನದಲ್ಲ, ಸ್ವಾತಂತ್ರ್ಯ ಬಂದಾಗಿನಿಂದಲೂ ಕಾವೇರಿ ವಿಚಾರವಾಗಿ ರಾಜಕೀಯ ಮಾಡುತ್ತಾ ಬರುತ್ತಿದ್ದಾರೆ. ಈಗಾಗಲೇ ನ್ಯಾಯಾಧೀಕರಣದ ಅದೇಶವಾಗಿದೆ. ನೀರು ಕೊಡಲು ಕಾವೇರಿ ನಿಗಮ ಮಂಡಳಿ ಇದೆ. ನೀರು ಹಂಚಿಕೆ ಆಗುತ್ತಿದೆ. ಅವರ ನೀರಿನ ಹಂಚಿಕೆಯಾದ ಮೇಲೆ ನಾವು ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಹಾಕಿಕೊಂಡಿದ್ದೇವೆ. ಹೀಗಿದ್ದರೂ ಅವರು ಕುಡಿಯುವ ನೀರಿನ ಯೋಜನೆಗೆ ತಕರಾರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ವಿಧಾನಸಭೆ ನಿರ್ಣಯ ಕಾನೂನು ಬಾಹಿರ: ಸಿಎಂ
ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಹೋಗುವ ಬಗ್ಗೆ ಸಂಜೆ ನಿರ್ಧರಿಸಲಾಗುತ್ತದೆ ಎಂದರು.
ಶಿವಸೇನೆ ನಾಯಕನಿಗೆ ತಿರುಗೇಟು: ಕಾಶ್ಮೀರ್ ಫೈಲ್ಸ್ ನಂತೆ ಬೆಳಗಾವಿ ಫೈಲ್ಸ್ ಬರಬೇಕು ಎಂಬ ಶಿವಸೇನಾ ನಾಯಕ ಸಂಜಯ್ ರಾವತ್ ಟ್ವೀಟ್ಗೆ, ಅದೊಂದು ಅವರ ಸ್ಟಂಟ್ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಬೆಳಗಾವಿ ವಿಚಾರವಾಗಿ 1956ರಲ್ಲೇ ಅಂತಿಮ ತೀರ್ಮಾನ ಆಗಿದೆ. ಸತ್ಯ ಹೇಳಬೇಕು ಅಂದರೆ ನಮ್ಮ ಕನ್ನಡ ಮಾತನಾಡುವ ಸೊಲ್ಲಾಪುರ, ಅಂಕನಕೋಟೆ ಮಹಾರಾಷ್ಟ್ರದಲ್ಲಿ ಉಳಿದಿದೆ. ಹೀಗಿದ್ದೂ ಅವರು ಈ ರೀತಿಯಲ್ಲಿ ಮಾತನಾಡುವುದರಲ್ಲಿ ಯಾವುದೇ ಅರ್ಥ ಇಲ್ಲ. ಅವರು ಅಲ್ಲಿನ ಸಮಸ್ಯೆಗಳನ್ನು ಡೈವರ್ಟ್ ಮಾಡಲು ಬೆಳಗಾವಿ ಹೆಸರಲ್ಲಿ ಈ ಕೆಲಸ ಮಾಡುತ್ತಾರೆ ಎಂದರು.