ಬೆಳಗಾವಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ನಿರಾಕರಣೆ ಅವರ ಪಕ್ಷದ ವಿಚಾರ. ಆ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ನಮ್ಮ ಹಿರಿಯ ನಾಯಕ ಬಿಎಸ್‌ವೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಎಲ್ಲೆಲ್ಲಿ ಜೆಡಿಎಸ್ ಸ್ಪರ್ಧಿಸಲ್ಲವೋ ಅಲ್ಲಲ್ಲಿ ನಮಗೆ ಬೆಂಬಲ ಕೊಟ್ಟರೆ ಒಳ್ಳೆಯದು ಅಂತಾ ಕೇಳಿದ್ದರು. ನಾವೇನು ಅವರ ಬೆಂಬಲ ಕೇಳಿರಲಿಲ್ಲ. ಅವರು ಏನು ತೀರ್ಮಾನ ತಗೆದುಕೊಳ್ತಾರೋ ತಗೆದುಕೊಳ್ಳಲಿ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.
ಬೆಳಗಾವಿಯಲ್ಲಿ ಅಧಿವೇಶನ:
ಡಿ. 13ರಿಂದ 10 ದಿನಗಳ ಕಾಲ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಸ್ಪೀಕರ್ ಹಾಗೂ ಸಭಾಪತಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಡಳಿತದಿಂದಲೂ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಎರಡು ವರ್ಷದಿಂದ ಕೋವಿಡ್ ಕಾರಣದಿಂದಾಗಿ ಅಧಿವೇಶನ ನಡೆಸಲು ಆಗಿರಲಿಲ್ಲ. ಇದೀಗ ಕೋವಿಡ್ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಿ ಅಧಿವೇಶನ ನಡೆಸುತ್ತೇವೆ ಎಂದರು.
ವಿನೂತನ ಕಾರ್ಯಕ್ರಮಗಳನ್ನು ಸರ್ಕಾರ ಮಾಡುತ್ತಿದೆ:
ಬೆಳಗಾವಿ ಅಧಿವೇಶನದಲ್ಲಿ ಮಳೆಯಿಂದ ಆದ ಹಾನಿ ಮತ್ತು ಪರಿಹಾರದ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಈಗಾಗಲೇ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಚರ್ಚೆ ಆಗಲಿ. ನಿನ್ನೆವರೆಗೂ 420 ಕೋಟಿ ರೂ. ನೆರೆ ಪರಿಹಾರ ಕೊಟ್ಟಿದ್ದೇವೆ. ಈ ಭಾಗದಲ್ಲಿ ದ್ರಾಕ್ಷಿ ಮತ್ತು ತರಕಾರಿ ಬೆಳೆ ಸಾಕಷ್ಟು ಹಾನಿಯಾಗಿದೆ. ಅವುಗಳಿಗೂ ಪರಿಹಾರ ಒದಗಿಸಲು ತೀರ್ಮಾನ ಮಾಡಿದ್ದೇವೆ. ವಸತಿ ರಹಿತರಿಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇನ್ನು ಮುಂದುವರೆದು ಮಾತನಾಡಿದ ಸಿಎಂ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಇಂಟರ್ನೆಟ್ ಸೇವೆಗೆ ತಯಾರಿ ಮಾಡುತ್ತಿದ್ದೇವೆ. ಗ್ರಾಮ ಪಂಚಾಯಿತಿಯನ್ನ ಆಧುನೀಕರಣ ಮಾಡಿ ಎಲ್ಲ ಸೇವೆ ಒಂದೇ ಕಡೆ ದೊರಕಿಸುವ ವ್ಯವಸ್ಥೆ ಮಾಡುತ್ತೇವೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಮಟ್ಟದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಸರ್ಕಾರ ಮಾಡುತ್ತಿದೆ ಎಂದರು.
ಕವಟಗಿಮಠ ನಮ್ಮ ಅಧಿಕೃತ ಅಭ್ಯರ್ಥಿ:
ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ. ನಮ್ಮ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ. ಎರಡನೇ ಮತದ ಬಗ್ಗೆ ಗೊಂದಲ ಇದೆಯಲ್ಲ ಎಂಬ ಪ್ರಶ್ನೆಗೆ, ಮತದಾರರಿಗೆ ಅದು ಸೀಕ್ರೆಟ್ ಬ್ಯಾಲೆಟ್, ಅದನ್ನು ನಾವು ನೀವು ಚರ್ಚೆ ಮಾಡೋಕಾಗುತ್ತಾ? ಇದು ಅಪ್ರಸ್ತುತ ಎಂದರು.
ಇಲ್ಲಿ ತ್ರಿಕೋನ ಸ್ಪರ್ಧೆ ಇದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಲಖನ್ ಪಕ್ಷೇತರರಾಗಿ ನಿಂತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡೋದೇ ನಮ್ಮ ಗುರಿ. ಆ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.
ಮೊದಲನೇ ಪ್ರಾಶಸ್ತ್ಯ ಮತ ಮಹಾಂತೇಶ ಕವಟಗಿಮಠಗೆ:
ಮತದಾರರು ಯಾರಿಗೆ ಮೊದಲನೇ, ಎರಡನೇ, ಮೂರನೇ, ನಾಲ್ಕನೇ ಮತ ಹಾಕುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ, ನಮ್ಮ ಬಿಜೆಪಿ ಬೆಂಬಲಿಗ ಗ್ರಾ.ಪಂ. ಸದಸ್ಯರು, ಕಾರ್ಯಕರ್ತರು ಮೊದಲನೇ ಪ್ರಾಶಸ್ತ್ಯದ ಮತ ಮಹಾಂತೇಶ ಕವಟಗಿಮಠಗೆ ಕೊಡುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ಇದೆ. ಅದೇ ತರಹ ನಮ್ಮ ಆದೇಶವೂ ಇದೆ. ಇದು ವಿಧಾನಸಭಾ ಚುನಾವಣೆ ಅಲ್ಲ, ಪ್ರಿಫರೆನ್ಷಿಯಲ್ ವೋಟ್ ಇರುತ್ತದೆ. ನಮ್ಮ ಫಸ್ಟ್ ಪ್ರಿಫರೆನ್ಸ್ ಮಹಾಂತೇಶ ಕವಟಗಿಮಠ. ಇಲ್ಲಿರುವ ಮೂವರು ಅಭ್ಯರ್ಥಿಗಳು ಖಂಡಿತವಾಗಿ ಪ್ರಬಲರಿದ್ದಾರೆ ಎಂದರು.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ.. ಬಿಜೆಪಿ ಜೊತೆ ಮೈತ್ರಿ ಇಲ್ಲ: ಹೆಚ್.ಡಿ. ಕುಮಾರಸ್ವಾಮಿ
ಬಿಜೆಪಿ ಗೆಲ್ಲಬೇಕು, ಕಾಂಗ್ರೆಸ್ ಸೋಲಬೇಕು ಎಂಬ ಹೇಳಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಎಂಬ ಹೇಳಿಕೆ ನನ್ನಿಂದ ನಿರೀಕ್ಷೆ ಮಾಡುತ್ತೀರಾ? ಬಿಜೆಪಿ ಗೆಲ್ಲಬೇಕು ಎಂಬ ಹೇಳಿಕೆಯನ್ನು ನೀವು ನಿರೀಕ್ಷೆ ಮಾಡಬೇಕು. ಇಡೀ ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ವಿರುದ್ಧ ರಾಜಕಾರಣ ಮಾಡುವಾಗ ನನ್ನಿಂದ ಏನು ನಿರೀಕ್ಷಿಸುತ್ತೀರಿ? ಎಂದು ನಗುನಗುತ್ತಲೇ ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್ ಬೆಂಬಲಕ್ಕೆ ಸಿಎಂ ನಿಂತರು.