ಬೆಳಗಾವಿ: ಇಲ್ಲಿನ ಕಾಕತಿ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಸರ್ವಿಸ್ ರಸ್ತೆಗೆ (20 ಅಡಿ ಕೆಳಗೆ) ಉರಳಿದ್ದು, ಅದರಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದೆ.
ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಬರುತ್ತಿದ್ದಾಗ ಚಾಲನ ನಿಯಂತ್ರಣ ತಪ್ಪಿದೆ. 20 ಅಡಿ ಉರಳಿದ್ದಕ್ಕೆ ಕಾರು ಸಂಪೂರ್ಣ ನಜ್ಜಾಗಿದ್ದು, ಕಾರಿನಲ್ಲಿದ್ದ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸದ ನಿಮಿತ್ತ ಇಂದು ಬೆಳಗ್ಗೆ ಹಾರೂಗೇರಿಯಿಂದ ಬೆಳಗಾವಿ ಕಡೆಗೆ ಬರುವಾಗ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಮೂವರು ರಾಯಭಾಗ ತಾಲೂಕಿನ ಹಾರೂಗೇರಿ ಸಮೀಪದ ಯಬರಟ್ಟಿ ಗ್ರಾಮದವರು ಎಂದು ಶಂಕಿಸಲಾಗಿದ್ದು, ಹೆಸರುಗಳು ಪತ್ತೆಯಾಗಿಲ್ಲ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.