ಬೆಳಗಾವಿ: ನಾನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆಯವರ ಬೆಂಬಲಿಗನಾಗಿ ಬೆಳೆದವನು. ಅವರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೋರೆಯವರ ಮಾರ್ಗದರ್ಶನದಂತೆ ಮುನ್ನಡೆಯುತ್ತೇನೆ ಎಂದು ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ಈರಣ್ಣಾ ಕಡಾಡಿ ಹೇಳಿದ್ದಾರೆ.
ನಗರದಲ್ಲಿ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಟಿಕೆಟ್ ಸಿಕ್ಕಿರುವ ಕುರಿತು ಈಗಾಗಲೇ ಪ್ರಭಾಕರ ಕೋರೆ ಹಾಗೂ ರಮೇಶ ಕತ್ತಿ ಪೋನ್ ಮೂಲಕ ಶುಭಾಶಯಗಳನ್ನ ತಿಳಿಸಿದ್ದು, ನಾನು ಅವರ ಮಾರ್ಗದರ್ಶನದಲ್ಲಿಯೇ ಮುನ್ನಡೆಯುತ್ತೇನೆ. ಕೋರೆಯವರು ನನ್ನ ತಂದೆಯ ವಯಸ್ಸಿನ ಸಮಾನರು. ಬಿಜೆಪಿ ಪಕ್ಷದಲ್ಲಿ ಕೋರೆ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿದ ರಮೇಶ ಕತ್ತಿಯವರ ಕೊಡುಗೆ ಉತ್ತರ ಕರ್ನಾಟಕ ಭಾಗಕ್ಕೆ ಬೇಕಾಗುತ್ತೆ. ಹೀಗಾಗಿ ಪಕ್ಷ ಅವರನ್ನು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಬಹುದು. ಸ್ವಲ್ಪ ಕಾಯಬೇಕಷ್ಟೇ ಎಂದರು.
ಭಾರತೀಯ ಜನತಾ ಪಾರ್ಟಿ, ಕಾರ್ಯಕರ್ತರ ಆಧಾರಿತ ಪಕ್ಷ. ಹೀಗಾಗಿ ಕಾರ್ಯಕರ್ತರಿಗೆ ಬಲ ನೀಡುವ ಹಾಗೂ ವಿಶ್ವಾಸ ಮೂಡಿಸಲು ಇಂತಹ ನಿರ್ಣಯ ಕೈಗೊಂಡಿದ್ದು, ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸಿ ಟಿಕೆಟ್ ನೀಡಿರುವುದರಿಂದ ಪಕ್ಷದ ಕಾರ್ಯಕರ್ತರ ವಲಯದಲ್ಲಿಯೂ ಸಾಕಷ್ಟು ಬಲ ಬಂದಿದೆ. ರಾಜ್ಯದ ಹಲವು ಭಾಗಗಳಿಂದ ಕಾರ್ಯಕರ್ತರು ಫೋನ್ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ನಾಳೆ ಬೆಳಗ್ಗೆ 11ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಜಿಲ್ಲೆಯ ಎಲ್ಲ ಪ್ರಮುಖ ನಾಯಕರಿಗೂ ನಾಮಪತ್ರ ಸಲ್ಲಿಕೆಗೆ ಬರುವಂತೆ ಆಹ್ವಾನ ಮಾಡಿದ್ದು,ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲು ನಾಮಪತ್ರ ಸಲ್ಲಿಕೆಗೆ ಬರಲಿದ್ದಾರೆ ಎಂದರು.