ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಯುವಕರು ಕೆಪಿಎಲ್(ಕುಲಗೋಡ ಪ್ರೀಮಿಯರ್ ಲೀಗ್) ಆಯೋಜನೆ ಮಾಡಿದ್ದು, ಈ ಟೂರ್ನಿಯನ್ನು ಐಪಿಎಲ್ ಮಾದರಿಯಲ್ಲೇ ನಡೆಸಲಿದ್ದಾರೆ.
ಕೆಪಿಎಲ್ ಹೆಸರಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಗ್ರಾಮದ ಬೆಸ್ಟ್ ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕವೇ ತಂಡಗಳು ಖರೀದಿಸಿವೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಾಗಿ ಹರಾಜು ಪ್ರಕ್ರಿಯೆಯ ಮೂಲಕ ಆಟಗಾರರನ್ನ ಕೊಂಡುಕೊಳ್ಳೋದು ಕಾಮನ್. ಅದರಂತೆಯೇ ಎಲ್ಇಡಿ ಸ್ಕ್ರೀನ್, ತಂಡಕ್ಕೊಂದು ವಿಐಪಿ ಲೆವೆಲ್ ರೌಂಡ್ ಚೇರ್ ಸೇರಿದಂತೆ ಥೇಟ್ ಐಪಿಎಲ್ ಶೈಲಿಯಲ್ಲೇ ಹರಾಜು ಪ್ರಕ್ರಿಯೆ ನಡೆಸುತ್ತಾರೆ.
ಈ ಕುಲಗೋಡ ಪ್ರೀಮಿಯರ್ ಲೀಗ್ ಅಂದ್ರೆ ಯುವಕರಿಗೆ ಸಖತ್ ಕ್ರೇಜ್ ಇದೆ. ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಂಡ ಮಾಲೀಕರು ಇವರಿಗೆ ಹಣ ನೀಡಿದರೆ, ಒಂದು ರೂಪಾಯಿ ಮುಟ್ಟದೇ ಈ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾಗಿರುವ ಶ್ರೀರಾಮ ಸ್ಪೊರ್ಟ್ಸ್ ಕ್ಲಬ್ಗೆ ನೀಡುತ್ತಾರೆ. ಈ ಹಣವನ್ನು ಆಯೋಜಕರು ಸಮಾಜ ಸೇವೆಗೆ ಬಳಸುತ್ತಾರಂತೆ. ಶೈಕ್ಷಣಿಕ ಕಾರ್ಯಾಗಾರ ಹಾಗೂ ಸೈನಿಕ ತರಬೇತಿ ಕೇಂದ್ರಗಳಿಗೆ ಈ ಹಣ ಮೀಸಲಿಡುತ್ತೇವೆ ಎಂದು ಹೇಳಿದ್ದಾರೆ.