ಬೆಳಗಾವಿ: ಗೋಕಾಕ್ ಕ್ಷೇತ್ರದ ಉಪಚುನಾವಣೆ ಮುಗಿದರೂ ದಾಯಾದಿಗಳ ವಾಕ್ಸಮರ ಮಾತ್ರ ಇನ್ನೂ ನಿಂತಿಲ್ಲ. ಗೋಕಾಕ್ ನಗರದಲ್ಲಿ ಲಖನ್ ಜಾರಕಿಹೊಳಿ ಕಚೇರಿ ಎದುರು ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ಸತೀಶ ಜಾರಕಿಹೊಳಿ ಮತ್ತು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ ವಾಗ್ದಾಳಿ ಮುಂದುವರಿಸಿದ್ದಾರೆ.
ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಪರವಾಗಿದ್ದವರು ನಮಗೆ ವೋಟ್ ಹಾಕಿದ್ದಾರೆ. ಅವರನ್ನು ವಿರೋಧಿಸುವವರು ಬಿಜೆಪಿಗೆ ಮತ ಹಾಕಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರದಿದ್ರೆ ರಮೇಶ್ ಮೂರನೇ ಸ್ಥಾನದಲ್ಲಿರ್ತಿದ್ದ. ಬಾಲಚಂದ್ರ ಸಾಥ್ ನೀಡಿದ್ದಕ್ಕೆ ರಮೇಶ್ ಗೆದ್ದಿದ್ದಾನೆ. ಸೋಲುತ್ತೇವೆ ಎಂದು ಗೊತ್ತಾಗುತ್ತಿದ್ದಂತೆ ರಮೇಶ್ ಅಳಿಯ ಅಂಬಿರಾವ್ ಲಕ್ಷಗಟ್ಟಲೇ ಹಣಹಂಚಿದ್ದಾನೆ ಎಂದು ಆರೋಪಿಸಿದರು.
ನೀರಾವರಿ, ಡಿಸಿಎಂ ಖಾತೆ ನೀಡಲಿ ಎಂಬ ಕಾರಣಕ್ಕೆ ರಮೇಶ್ ಸಿದ್ದರಾಮಯ್ಯನನ್ನು ಭೇಟಿ ಆಗಿದ್ದಾರೆ. ಈಗ ರಮೇಶ್ ಗೆ ಕುಮಾರಸ್ವಾಮಿಯೂ ಬೇಕಾಗುತ್ತಾರೆ. ಮೋಸ, ಬ್ಲ್ಯಾಕ್ ಮೇಲ್ ಮಾಡಲೆಂದೇ ಇವರು ರಾಜಕೀಯಕ್ಕೆ ಬಂದಿದ್ದಾರೆ. ಸಿಎಂ ಬಿಎಸ್ ವೈರನ್ನೂ ರಮೇಶ್ ಬ್ಲ್ಯಾಕ್ ಮೇಲ್ ಮಾಡುವುದು ಶತಸಿದ್ಧ ಎಂದು ಸತೀಶ್ ಆರೋಪಿಸಿದರು. ರಮೇಶ್ ಏನೇ ಆದರೂ ನಮ್ಮ ತಾಲೂಕಿಗೆ ಉಪಯೋಗ ಆಗಲ್ಲ. ಮುಂದಿನ ಚುನಾವಣೆಯಲ್ಲಿ ರಮೇಶ್ ರಕ್ಷಣೆಗೆ ಯಾರೂ ಬರಲ್ಲ. ಹೀಗಾಗಿ ನಾವು ಪಕ್ಷ ಬಲಪಡಿಸಬೇಕಾಗಿದೆ ಎಂದರು.
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ ಮಾತನಾಡಿ, ಮಾವ-ಅಳಿಯನ ವಿರುದ್ಧ ನಾವು ಸೋತಿಲ್ಲ. ಯಡಿಯೂರಪ್ಪನವರ ವಿರುದ್ಧ ಸೋತಿದ್ದೇವೆ. ಯಡಿಯೂರಪ್ಪನವರ ಮುಖ ನೋಡಿ ಜನ ರಮೇಶಗೆ ಮತ ಹಾಕಿದ್ದಾರೆ. ರಮೇಶ್ ನನ್ನು ನೀರಾವರಿ ಸಚಿವರನ್ನಾಗಿ ಮಾಡಿದ್ರೆ ಬಿಜೆಪಿಯನ್ನು ನೀರಿಗೆ ಬಿಡ್ತಾನೆ. ಬಿಜೆಪಿಗರನ್ನು ಬ್ಲಾಕ್ ಮೇಲ್ ಮಾಡಲೆಂದೇ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾನೆ. ರಮೇಶ್ ಗೆ ಪೌರಾಡಳಿತ ಖಾತೆ ಕೊಟ್ಟರೆ ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರುತ್ತೆ. ಮುಂದಿನ ಚುನಾವಣೆಯಲ್ಲಿಯೂ ರಮೇಶ್ ವಿರುದ್ಧ ನಾನೇ ಸ್ಪರ್ಧಿಸುತ್ತೇನೆ ಎಂದರು.