ಬೆಳಗಾವಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ 10 ದಿನಗಳ ಚಳಿಗಾಲ ಅಧಿವೇಶನಕ್ಕೆ ಬರೋಬ್ಬರಿ 13,85 ಕೋಟಿ ರೂ. ವೆಚ್ಚವಾಗಿದೆ. ಕಲಾಪ ನಡೆದ ಅವಧಿ ಗಮನಿಸಿದ್ರೆ, ಪ್ರತಿ ಗಂಟೆಗೆ 3.36 ಲಕ್ಷ ರೂ. ವೆಚ್ಚ ಮಾಡಿರುವ ಸಂಗತಿ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.
ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಯಾಗಿ ಪರಿಹಾರ ಸಿಗಲಿ ಎಂಬ ಆಶಯದೊಂದಿಗೆ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ. ಇಲ್ಲಿ ಅಧಿವೇಶನ ನಡೆಸುತ್ತಿದ್ದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು, ಸಮಸ್ಯೆಗಳಾಗಿಯೇ ಉಳಿದಿವೆ. ಆದರೆ ಅಧಿವೇಶನಕ್ಕೆ ಕೋಟ್ಯಂತರ ರೂ. ದುಂದು ವೆಚ್ಚ ಮಾಡಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. 2018ರ ಚಳಿಗಾಲ ಅಧಿವೇಶನದಲ್ಲಿ ವಿಧಾನಸಭೆಯ ಕಲಾಪ 40.25 ಗಂಟೆ ಹಾಗೂ ಪರಿಷತ್ 47.03 ಗಂಟೆ ಕಲಾಪಗಳು ನಡೆದಿದ್ದು, ಪ್ರತಿ ಗಂಟೆಗೆ 3.37 ಲಕ್ಷ ರೂ. ಹಣ ವ್ಯಯಿಸಲಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಅಧಿವೇಶನದಲ್ಲಿ ಸಮರ್ಪಕವಾಗಿ ನಡೆದಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆರೋಪಿಸಿದ್ದಾರೆ.
ವಸತಿ ವ್ಯವಸ್ಥೆಗೆ 4.42 ಕೋಟಿ, ಪ್ರತಿಭಟನೆಯ ಪೆಂಡಾಲ್‍ಗೆ 2.33 ಕೋಟಿ, ಊಟ-ಉಪಹಾರಕ್ಕೆ 3 ಕೋಟಿ ರೂ, ಭತ್ಯೆಗಳಿಗೆ 2.61 ಕೋಟಿ ಹೀಗೆ ಅಧಿವೇಶನಕ್ಕೆ ಒಟ್ಟು 13.85 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ವಸತಿಗೆ ವ್ಯವಸ್ಥೆಗೆ ಮಹಾನಗರದ ಪ್ರತಿಷ್ಠಿತ ಹೋಟೆಲ್‍ಗಳ 67 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಈ ಕೊಠಡಿಗಳ ಬಾಡಿಗೆಗೆ ಸರ್ಕಾರ 4.42 ಕೋಟಿ ರೂ. ಪಾವತಿಸಿದೆ.
10 ದಿನಗಳ ಅಧಿವೇಶನಕ್ಕೆ 50 ಇನ್ನೊವಾ, 20 ಸ್ವಿಫ್ಟ್ ಹಾಗೂ ಟವೇರಾ ವಾಹನ ಬಾಡಿಗೆ ಪಡೆದಿದ್ದ ಸರ್ಕಾರ ಇನ್ನೋವಾ ವಾಹನಗಳಿಗೆ 15.87 ಲಕ್ಷ ರೂ.,ಬಾಡಿಗೆ ಸ್ವಿಫ್ಟ್‍ಗೆ 4 ಲಕ್ಷ ಹಾಗೂ ವಾಹನಗಳ ಇಂಧನಕ್ಕೆ 12.81 ಲಕ್ಷ ರೂ. ವೆಚ್ಚ ಮಾಡಲಾಗಿದೆ.ಕಳೆದ ಅಧಿವೇಶನದಲ್ಲಿ ರೈತರ ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದೇ ಗಂಭೀರ ಚರ್ಚೆಗಳು ಹಾಗೂ ಯಾವುದೇ ಪರಿಹಾರ ದೊರೆತಿಲ್ಲ. ಆದರೂ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ಸೇರಿ ರಾಜ್ಯದ ಅಭಿವೃದ್ಧಿಗೆ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾದ 13.85 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇದನೆಲ್ಲ ನೋಡಿದ್ರೆ, ಆ ಅಧಿವೇಶನ ಸಾರ್ವಜನಿಕರ ತೆರಿಗೆ ಹಣ ನುಂಗಿದ ಅಧಿವೇಶನ ಎನ್ನಬೇಕಾಗುತ್ತದೆ ಎಂದು ಭೀಮಪ್ಪ ಗಡಾದ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಅಲ್ಲದೇ, ಇಷ್ಟೊಂದು ಪ್ರಮಾಣದಲ್ಲಿ ಆಗುತ್ತಿರುವ ದುಂದು ವೆಚ್ಚಕ್ಕೂ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.