ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನದ ವಿಧಾನ ಪರಿಷತ್ ಕಲಾಪದಲ್ಲಿ ನಟ ಪುನೀತ್ ರಾಜಕುಮಾರ್, ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಪರಿಷತ್ನಲ್ಲಿ ಸಂತಾಪ ಸೂಚಿಸಲಾಯಿತು.
ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾಜಿ ರಾಜ್ಯಪಾಲ ರೋಸಯ್ಯ, ಸಹಕಾರಿ ತಜ್ಞ ವಿರೂಪಾಕ್ಷಪ್ಪ ಸಂಗಣ್ಣ ಅಗಡಿ, ಮಾಜಿ ಸಚಿವ ಎಸ್.ಆರ್.ಮೋರೆ, ನಟ ಪುನೀತ್ ರಾಜ್ ಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಪಿ. ಬೋಜರಾಜ ಹೆಗಡೆ, ವಿದ್ವಾಂಸ ಕೆ.ಎಸ್.ನಾರಾಯಣಾಚಾರ್, ರಂಗ ಕಲಾವಿದೆ ನಾಡೋಜ ಪದ್ಮಮ್ಮ, ಹಿರಿಯ ನಟ ಶಿವರಾಮ್, ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಜೊತೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಅಗಲಿದ ಸಿಡಿಎಸ್ ರಾವತ್, ಅವರ ಪತ್ನಿ ಹಾಗೂ ಯೋಧರಿಗೆ ಸಂತಾಪ ಸೂಚನೆ ಗೊತ್ತುವಳಿ ಮಂಡಿಸಿದರು.
ಸಂತಾಪ ಸೂಚನೆ ನಿಲುವಳಿ ಬೆಂಬಲಿಸಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ರೋಸಯ್ಯ ಅವರ ರಾಜಕೀಯ ಹಾದಿ, ನಿರ್ವಹಿಸಿದ ಜವಾಬ್ದಾರಿ, ದಾಖಲೆಯ ಆಯವ್ಯಯ ಮಂಡನೆಯನ್ನು ಸ್ಮರಿಸಿದರು. ಸಹಕಾರಿ ತಜ್ಞ ವಿರೂಪಾಕ್ಷಪ್ಪ ಸಂಗಣ್ಣ ಅಗಡಿ ಸಹಕಾರಿ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆಯನ್ನು ಸ್ಮರಿಸಿ ಸಹಕಾರಿ ಕ್ಷೇತ್ರದ ಸುಧಾರಣೆಗೆ ಶ್ರಮಿಸಿದ್ದನ್ನು ಕೊಂಡಾಡಿದರು. ಅವಿಭಾಜ್ಯ ಧಾರವಾಡ ಜಿಲ್ಲೆಯಲ್ಲಿ ಹೆಸರು ಮಾಡಿದ್ದ ಎಸ್.ಆರ್ ಮೋರೆ, ಸಚಿವರಾಗಿ ಕೆಲಸ ಮಾಡಿ, ಬಡವರ, ದುರ್ಬಲ ವರ್ಗದವರ ಬಗ್ಗೆ ಹೊಂದಿದ್ದ ಕಾಳಜಿಯನ್ನು ಸ್ಮರಿಸಿದರು.
ನಟ ಪುನೀತ್ ರಾಜ್ ಕುಮಾರ್ ಕೇವಲ ಕಲಾವಿದರಾಗಿ ಮಾತ್ರವಲ್ಲ, ಎಲೆಮರೆ ಕಾಯಿಯಂತೆ ಸಮಾಜ ಸೇವೆ, ದುರ್ಬಲ ವರ್ಗಕ್ಕೆ, ಅನಾಥರ ಬಗ್ಗೆ ಹೊಂದಿದ್ದ ಕಾಳಜಿ, ವೃದ್ಧಾಶ್ರಮ, ಗೋಶಾಲೆ, ಅನಾಥಾಶ್ರಮ ನಡೆಸುತ್ತಾ ಯುವ ಸಮೂಹಕ್ಕೆ ಮಾದರಿಯಾಗಿದ್ದರು ಎಂದು ಸ್ಮರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಪಿ ಬೋಜರಾಜ ಹೆಗಡೆ ಗಾಂಧಿ ಜೊತೆ ಹೊಂದಿದ್ದ ಒಡನಾಟ, ಕ್ವಿಟ್ ಇಂಡಿಯಾ ಮೂವ್ ಮೆಂಟ್ ನಲ್ಲಿ ಭಾಗಿಯಾಗದ್ದನ್ನು ಸ್ಮರಿಸಿದರು.
ವಿದ್ವಾಂಸ ಕೆ.ಎಸ್. ನಾರಾಯಣಾಚಾರ್ ಪ್ರವಚನ, ಭಾಗವತ, ವೇದ ಉಪನಿಷತ್ ನಲ್ಲಿ ಪ್ರವಚನ ನೀಡಿದ್ದನ್ನು ಸ್ಮರಿಸಲಾಯಿತು. ರಂಗ ಕಲಾವಿದೆ ನಾಡೋಜ ಪದ್ಮಮ್ಮ ರಂಗಭೂಮಿಯ ಹಿರಿಯ ಕಲಾವಿದೆಯಾಗಿದ್ದರು. ಬಯಲಾಟದಲ್ಲಿ ಪೌರಾಣಿಕ ನಾಟಕದಲ್ಲಿನ ಅಭಿನಯ ಸ್ಮರಿಸಲಾಯಿತು. ಹಿರಿಯ ನಟ ಶಿವರಾಮ್ ನಾಟಕದಲ್ಲಿ ಪಾತ್ರ ಮಾಡಿದ್ದರು. 600 ಕ್ಕೂ ಹೆಚ್ಚಿನ ಚಿತ್ರದಲ್ಲಿ ನಟಿಸಿ ನಿರ್ದೇಶಕ, ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದರು ಎಂದು ಚಿತ್ರರಂಗಕ್ಕೆ ನೀಡಿದ್ದ ಕೊಡುಗೆ ಸ್ಮರಿಸಿದರು.
ಸಿಡಿಎಸ್ ಬಿಪಿನ್ ರಾವತ್ ಸೇನಾಪಡೆಗಳ ಮೊದಲ ಮುಖ್ಯಸ್ಥರಾಗಿದ್ದರು. ಇವರ ನಿಧನ ಭಾರತ ಮಾತೆಯ ರತ್ನಖಚಿತ ಕಿರೀಟದಿಂದ ಅನರ್ಘ್ಯ ರತ್ನವೊಂದು ಕಳಚಿದಂತಾಗಿದೆ ಎಂದು ಸ್ಮರಿಸಿ ಸಂತಾಪ ಸೂಚನೆ ಗೊತ್ತುವಳಿ ಬೆಂಬಲಿಸಿದರು.
ಸರ್ಕಾರದ ನಡೆಗೆ ಮೆಚ್ಚುಗೆ : ನಟ ಪುನೀತ್ ರಾಜ್ ಕುಮಾರ್ ನಿಧನದ ವೇಳೆ ಅವೆ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ಅಚ್ಚುಕಟ್ಟಾದ ನಿರ್ವಹಣೆ ಮಾಡಿ ಎಲ್ಲಿಯೂ ಯಾವ ಲೋಪವೂ ಆಗದಂತೆ ನೋಡಿಕೊಂಡಿತು. ಈ ಹಿಂದೆ ರಾಜ್ ಕುಮಾರ್, ವಿಷ್ಣುವರ್ಧನ್ ನಿಧನದ ವೇಳೆ ಆದಂತಹ ಅಹಿತಕರ ಘಟಕನೆಗಳಾಗದ ರೀತಿ ಮುನ್ನೆಚ್ಚರಿಕೆ ವಹಿಸಿ ವ್ಯವಸ್ಥಿತವಾಗಿ ನೋಡಿಕೊಳ್ಳಲಾಯಿತು. ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎಸ್.ಆರ್. ಪಾಟೀಲ್ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ತನಿಖೆಯಾಗಲಿ : ಇನ್ನು ಮೂರು ಪಡೆಗಳ ಮೊದಲ ಮುಖ್ಯಸ್ಥರಾಗಿದ್ದ ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಪ್ರಕರಣವನ್ನು ಆಳವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನಂತರ ಸಭಾಪತಿ ಬಸವರಾಜ ಹೊರಟ್ಟಿ ಮೃತರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನೂ ಕರುಣಿಸಲಿ ಎಂದು ತಿಳಿಸುತ್ತಾ ಸದನದಲ್ಲಿ ಒಂದು ನಿಮಿಷ ಮೌನಾಚರಿಸಿ ಸಂತಾಪ ಸೂಚಿಸಿ ಮೃತರಿಗೆ ಗೌರವ ಸಲ್ಲಿಸಲಿಸಿದರು.
ವಿಧಾನಸಭೆಯ ಕಲಾಪ ಆರಂಭ
ವಂದೇ ಮಾತರಂ ಹೇಳುವ ಮೂಲಕ ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ವಿಧಾನಸಭೆ ಕಲಾಪ ಆರಂಭವಾಗಿದ್ದು, ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸಂತಾಪ ಸೂಚಕ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹಿರಿಯ ನಟ ಶಿವರಾಂ, ಮಾಜಿ ರಾಜ್ಯಪಾಲ ಕೆ. ರೋಸಯ್ಯ, ಮಾಜಿ ಸಚಿವ ಎಸ್.ಆರ್. ಮೋರೆ, ಡಾ. ಎಂ.ಪಿ. ಕರ್ಕಿ, ಸಹಕಾರಿ ತಜ್ಞ ವಿರೂಪಾಕ್ಷಪ್ಪ ಸಂಗಣ್ಣ ಅಗಡಿ, ವಿದ್ವಾಂಸ ಪ್ರೊ. ನಾರಾಯಣಾಚಾರ್ಯ, ರಾಮಭಟ್, ಸ್ವಾತಂತ್ರ್ಯ ಹೋರಾಟಗಾರ ಬೋಜರಾಜ ಹೆಗಡೆ ಸೇರಿದಂತೆ ಅಗಲಿದ ಗಣ್ಯರ ನಿಧನಕ್ಕೆ ಸ್ಪೀಕರ್ ಸಂತಾಪ ವ್ಯಕ್ತಪಡಿಸಿದರು. ಸಂತಾಪ ಸೂಚಕ ನಿರ್ಣಯದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರ ನಾಯಕರು ಅಗಲಿದ ಗಣ್ಯರ ಗುಣಗಾನ ಮಾಡಿ ಸಂತಾಪ ಸೂಚಿಸಿದರು.