ಬೆಳಗಾವಿ: 12 ಮಂದಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಬುರ್ಖಾ ಧರಿಸಿ ನಗರದ ವಿಜಯ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿಗೆ ಆಗಮಿಸಿದ್ದು, ಇಂದು ಕೂಡ ಹಿಜಾಬ್ಗೆ ಅವಕಾಶ ಕೊಡುವಂತೆ ಪಟ್ಟು ಹಿಡಿದರು.
ಸದಾಶಿವ ನಗರದಲ್ಲಿರುವ ಕಾಲೇಜಿನಲ್ಲಿ ನಿನ್ನೆಯೂ ಹಿಜಾಬ್ಗೆ ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರಿಗೆ ಕಾಲೇಜು ಸಿಬ್ಬಂದಿ ಹೈಕೋರ್ಟ್ ಆದೇಶ ಪಾಲಿಸುವಂತೆ ಸೂಚಿಸಿದ್ದರು. ಆದ್ರೆ ಇದಕ್ಕೆ ಕಿಮ್ಮತ್ತು ಕೊಡದೇ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ಮಾಡಿದ್ದರು.
ಹೈಕೋರ್ಟ್ ಆದೇಶ ಡಿಪ್ಲೊಮಾ, ಡಿಗ್ರಿ ಕಾಲೇಜಿಗೆ ಅನ್ವಯ ಆಗೋದಿಲ್ಲ ಎಂದು ವಿದ್ಯಾರ್ಥಿನಿಯರು ಆದೇಶ ಪ್ರತಿಯನ್ನು ಹಿಡಿದು ಕಾಲೇಜಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರಕಾಶ ಪಾಟೀಲ್ ಅವರು ವಿದ್ಯಾರ್ಥಿನಿಯರನ್ನು ಕಾಲೇಜಿನೊಳಗೆ ಕರೆದೊಯ್ದು, ಮನವೊಲಿಸಲು ಪ್ರಯತ್ನಿಸಿದರು. ಆದ್ರೆ ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರು.
ಇನ್ನು ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತೆಯ ಉಸ್ತುವಾರಿ ಹೊತ್ತಿದ್ದಾರೆ.
ಡಿಸಿ ಹಿರೇಮಠ ಭೇಟಿ: ಕಾಲೇಜಿನಲ್ಲಿ ಹಿಜಾಬ್, ಬುರ್ಖಾ ಧರಿಸಲು ವಿದ್ಯಾರ್ಥಿನಿಯರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಕಾಲೇಜಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಸಿಪಿ ರವೀಂದ್ರ ಗಡಾದಿ ಅವರಿಂದ ಮಾಹಿತಿ ಪಡೆದುಕೊಂಡರು.
ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದ್ದ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ ಡಿಸಿ, ಹೈಕೋರ್ಟ್ ಆದೇಶದ ಕುರಿತು ಮನವರಿಕೆ ಮಾಡಿಕೊಟ್ಟರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೇಟ್ನಲ್ಲಿ ವಿದ್ಯಾರ್ಥಿನಿಯರನ್ನು ತಪಾಸಣೆ ಮಾಡದಂತೆ ಸೂಚನೆ ನೀಡಿದ್ದೇವೆ. ಇಂದು ಬುರ್ಖಾ, ಹಿಜಾಬ್ ಧರಿಸಿ ಬಂದಿರುವ ಮಕ್ಕಳಿಗೆ ತಿಳಿ ಹೇಳುವ ಕೆಲಸ ಮಾಡಿದ್ದೇನೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಧರ್ಮದ ಘೋಷಣೆ ಕೂಗಿದ ಯುವಕರು ಪೊಲೀಸ್ ವಶ
ಅವರಿಗೆ ತರಗತಿಯಲ್ಲಿ ಕುಳಿತುಕೊಳ್ಳಿ, ಪೋಷಕರ ಜೊತೆ ನಾವು ಮಾತನಾಡುತ್ತೇವೆಂದು ಭರವಸೆ ನೀಡಿದ್ದೇವೆ. ವಿದ್ಯಾರ್ಥಿನಿಯರ ಪೋಷಕರನ್ನು ಕಚೇರಿಗೆ ಕರೆಯಿಸಿಕೊಂಡು ನ್ಯಾಯಾಲಯದ ಆದೇಶದ ಬಗ್ಗೆ ತಿಳಿ ಹೇಳುತ್ತೇವೆ.
ಹಿಜಾಬ್ ತೆಗೆಯಲು ಚರ್ಚೆ ಮಾಡಿ ನಿರ್ಧರಿಸಿ ಎಂದು ವಿದ್ಯಾರ್ಥಿನಿಯರಲ್ಲಿ ತಿಳಿಸಿದ್ದೇವೆ. ಎಲ್ಲರೂ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿದ್ದಾರೆ. ಇನ್ನು ಗೋಕಾಕ್ನಲ್ಲಿ ವಿದ್ಯಾರ್ಥಿನಿಯರು ಕಾಲೇಜು ಹೊರಗೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿನಿಯರನ್ನು ಕಾಲೇಜು ಒಳಗೆ ಕರೆದುಕೊಂಡು ಹೋಗುವಂತೆ ಗೋಕಾಕ್ ತಹಶೀಲ್ದಾರ್ಗೆ ಸೂಚನೆ ನೀಡಿದ್ದೇನೆ ಎಂದು ಡಿಸಿ ಹೇಳಿದರು.