ಬೆಳಗಾವಿ: ಸೆ.3 ರಂದು ಮಹಾನಗರ ಪಾಲಿಕೆಯ 58 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ನಗರದ ಬಿ.ಕೆ.ಮಾಡಲ್ ಸ್ಕೂಲ್ನಲ್ಲಿ 58 ವಾರ್ಡ್ಗಳಿಗೆ ಸ್ಪರ್ಧಿಸಿದ್ದ 385 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮತ ಯಂತ್ರಗಳು ನಾಳೆ ಬೆಳಿಗ್ಗೆ ಓಪನ್ ಆಗಲಿವೆ. ಕಳೆದ ಮೂರು ವಾರಗಳಿಂದ ಕ್ಷೇತ್ರದಲ್ಲಿ ಸುತ್ತಾಡಿ ಮತದಾರರನ್ನು ಓಲೈಸಿರುವ ಅಭ್ಯರ್ಥಿಗಳ ಫಲಿತಾಂಶ ಹೊರಬೀಳಲಿದೆ.
ಎಣಿಕಾ ಕಾರ್ಯಕ್ಕಾಗಿ ಬೆಳಗಾವಿಯ ಬಿ.ಕೆ.ಮಾಡಲ್ ಹೈಸ್ಕೂಲಿನಲ್ಲಿ ಮತ ಎಣಿಕೆ ಕೇಂದ್ರ ತೆರೆಯಲಾಗಿದೆ. ತ್ವರಿತವಾಗಿ ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ..
ಇಂದು ಮಧ್ಯಾಹ್ನ 12 ಗಂಟೆಯ ನಂತರ ಸಂಪೂರ್ಣವಾಗಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಕಾರಣ, ಚುನಾವಣಾ ಫಲಿತಾಂಶವನ್ನು ತ್ವರಿತವಾಗಿ ಪೂರ್ಣಗೊಳಿಸಲು ಬಿ.ಕೆ.ಮಾಡಲ್ ಹೈಸ್ಕೂಲ್ನಲ್ಲಿ ಮತ ಎಣಿಕೆಗಾಗಿಯೇ 12 ರೂಮ್ಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 1 ರೂಮ್ನಲ್ಲಿ 2 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು ಒಟ್ಟು 12 ರೂಮ್ಗಳಲ್ಲಿ 24 ಟೇಬಲ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಏಕಕಾಲದಲ್ಲಿ 24 ವಾರ್ಡ್ಗಳ ಮತ ಎಣಿಕೆ ಪ್ರಾರಂಭವಾಗಲಿದೆ.

ಮಹಾನಗರ ಪಾಲಿಕೆಯ ಒಂದೊಂದು ವಾರ್ಡ್‌ಗಳಲ್ಲಿ ಮೂರಿಂದ ನಾಲ್ಕು ಮಗಟ್ಟೆಗಳಿವೆ. 1 ಟೇಬಲ್ನಲ್ಲಿ 1ವಾರ್ಡ್ನ ಮತ ಎಣಿಕೆ ಪೂರ್ಣಗೊಳಿಸಲು ಅರ್ಧ ಗಂಟೆ ಬೇಕಾಗುತ್ತದೆ. ಹೀಗಾಗಿ ಚುನಾವಣಾ ಫಲಿತಾಂಶ ಅಂದಾಜು 10 ರಿಂದ 12 ಗಂಟೆಯೊಳಗಾಗಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
385 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ:
ಬೆಳಗಾವಿ ಮಹಾನಗರ ಪಾಲಿಕೆ ಚುಮಾವಣೆ ವ್ಯಾಪ್ತಿಗೆ ಒಳಪಟ್ಟಿರುವ 58 ವಾರ್ಡ್‌ಗಳಲ್ಲಿ ಒಟ್ಟು 385 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆ ಪೈಕಿ ಬಿಜೆಪಿಯಿಂದ 55, ಕಾಂಗ್ರೆಸ್ನಿಂದ 45, ಎಂಇಎಸ್ ನಿಂದ 21, ಜೆಡಿಎಸ್ನಿಂದ 11, ಆಮ್ ಆದ್ಮಿ ಪಕ್ಷದಿಂದ 27, ಎಂಐಎಂ ಪಕ್ಷದಿಂದ 7, ಉತ್ತಮ ಪ್ರಜಾಕೀಯ, ಎಸ್ಡಿಪಿಐ ಪಕ್ಷದಿಂದ ಒಬ್ಬರು ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನೊಳಗೊಂಡು 217 ಜನ ಸೇರಿ ಒಟ್ಟು 385 ಅಭ್ಯರ್ಥಿಗಳ ಭವಿಷ್ಯ ನಾಳೆ ಮಧ್ಯಾಹ್ನದ ಹೊತ್ತಿಗೆ ನಿರ್ಧಾರವಾಗಲಿದೆ. ಇದಾದ ಬಳಿಕ ಮಹಾನಗರ ಪಾಲಿಕೆಯ 58 ವಾರ್ಡ್ಗಳಲ್ಲಿನ ಚುನಾಯಿತ ನಗರ ಸೇವಕರು ಪ್ರಮಾಣ ಪತ್ರ ಪಡೆದುಕೊಳ್ಳಲಿದ್ದಾರೆ.
ಇದನ್ನೂ ಓದಿ: ಎರಡು ವರ್ಷಗಳ ನಂತರ ಶಾಲೆಗೆ ಹೋಗುವ ಭಾಗ್ಯ ; ಸ್ಯಾನಿಟೈಸ್ಗೆ ಮುಂದಾದ ಶಾಲೆಗಳು