ಬೆಳಗಾವಿ: ಪರಿಸರ ರಕ್ಷಣೆ, ಬರಗಾಲ ಹಾಗೂ ಪ್ರಕೃತಿ ವಿಕೋಪದಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಈಗಿನಿಂದಲೇ ಪರಿಸರ ರಕ್ಷಣೆಗೆ ಮುಂದಾಗಿರುವ ಬೆಳಗಾವಿ ಜಿಲ್ಲಾ ಪಂಚಾಯತ್ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2024ರ ವೇಳೆಗೆ ಜಿಲ್ಲೆಯಲ್ಲಿ ಕೋಟಿ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಅಲ್ಲದೇ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವಲ್ಲಿ ಮಹತ್ವದ ಯೋಜನೆಗಳನ್ನು ರೂಪಿಸಲಾಗುವುದು ಎಂದು ಜಿಪಂ ಸಿಇಓ, ದರ್ಶನ್ ಎಚ್.ವಿ. ಮಾಹಿತಿ ನೀಡಿದರು.
ಓದಿ: ಮಹಾರಾಷ್ಟ್ರ- ಗೋವಾ ಲಾಕ್ಡೌನ್: ಬೆಮುಲ್ಗೆ ಕೋಟಿ ಕೋಟಿ ನಷ್ಟ!
ಪ್ರಸ್ತುತ ಕೋವಿಡ್‌ನಂತಹ ಸಂದರ್ಭದಲ್ಲಿ ಪರಿಸರ ರಕ್ಷಣೆ ಮತ್ತು ಬೆಳವಣಿಗೆಗೆ ಆದ್ಯತೆ ನೀಡುವ ತುರ್ತು ಅಗತ್ಯ ನಮಗಿದೆ. ಕೋವಿಡ್ ಪಿಡುಗು ಕಲಿಸಿಕೊಟ್ಟ ಪಾಠವನ್ನು ಸರ್ಕಾರ ಮತ್ತು ಜನರು ಅರ್ಥ ಮಾಡಿಕೊಳ್ಳುವ ಮೂಲಕ ಮರಗಳನ್ನು ಬೆಳೆಸಿ ಪರಿಸರ ರಕ್ಷಣೆಗೆ ಮುಂದಾಗಬೇಕು.
ಅಪಾಯದಲ್ಲಿರುವ ಪರಿಸರ ರಕ್ಷಣೆಗೆ ನಾವೆಲ್ಲರೂ ಮುಂದಾಗೋಣ:
ಸದ್ಯ ಬೆಳಗಾವಿ ಜಿಲ್ಲಾ ಪಂಚಾಯತ್ ನರೇಗಾದಡಿ ಖಾಲಿಯಿರುವ ಸರ್ಕಾರಿ ಜಮೀನು, ರಸ್ತೆ ಬದಿಗಳಲ್ಲಿ ಒಂದು ಕೋಟಿ ಸಸಿಗಳನ್ನು ನೆಡಲು ಪ್ಲಾನ್ ಹಾಕಿಕೊಂಡಿದೆ. ಅಂದುಕೊಂಡಂತೆ ಜಿಪಂ ಪ್ಲ್ಯಾನ್ ಸಕ್ಸಸ್ ಆಗಿದ್ದೇ ಆದರೆ, 2021-22ನೇ ಸಾಲಿನಲ್ಲಿ 20 ಲಕ್ಷ, 2022-23 ರಲ್ಲಿ 40 ಲಕ್ಷ ಹಾಗೂ 2023-24 ರಲ್ಲಿ 40 ಲಕ್ಷ ವೃಕ್ಷಗಳನ್ನು ಮೂರು ಹಂತದಲ್ಲಿ ನೆಡುವ ‘ಕೋಟಿವೃಕ್ಷ’ ಆಂದೋಲನ ಇನ್ನೂ ಎರಡ್ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಪರಿಸರ ಬೆಳವಣಿಗೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಯಶಸ್ವಿ ಆಗಲಿದೆ ಎನ್ನಬಹುದು.
ಪರಿಸರಸ್ನೇಹಿ ಹಾಗೂ ಜನಸ್ನೇಹಿ ಕಾಮಗಾರಿ:
ಪ್ರಸ್ತುತವಾಗಿ ಕೊರೊನಾ ಪಿಡುಗಿನ ಸಂದರ್ಭದಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕಷ್ಟು ಜನರು ಕೈಯಲ್ಲಿ ಉದ್ಯೋಗವಿಲ್ಲದೇ ಪರದಾಡುವಂತಹ ಸ್ಥಿತಿ ಎದುರಾಗಿದೆ. ಅಂಥವರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡುವ ಮೂಲಕ ಪರಿಸರಸ್ನೇಹಿ ಹಾಗೂ ಜನಸ್ನೇಹಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕೋಟಿವೃಕ್ಷ ಆಂದೋಲನದ ಭಾಗವಾಗಿ ಜಿಲ್ಲೆಯ 506 ಗ್ರಾಮ ಪಂಚಾಯತಿಗಳಲ್ಲಿ 3 ಲಕ್ಷ ಮುಂಗಡ ಗುಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಪ್ರತಿದಿನ ಸರಾಸರಿ 30 ರಿಂದ 40 ಸಾವಿರ ಮುಂಗಡ ಗುಂಡಿ ನಿರ್ಮಿಸಲಾಗುತ್ತಿದೆ. ಈಗಲೂ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಮುಂಗಡ ಗುಂಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಸಿಇಓ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲಾ ಪಂಚಾಯತ್ ಕೈಗೊಂಡಿರುವ ಕೋಟಿವೃಕ್ಷ ಆಂದೋಲನ ಕಾಮಗಾರಿಗೆ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಜಲಾನಯನ ಇಲಾಖೆಗಳ ಸಹಯೋಗ ವಹಿಸಿಕೊಂಡಿವೆ. ಅವುಗಳ ಮೂಲಕವೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಸಸಿಗಳನ್ನು ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ನರ್ಸರಿಗಳ ಮೂಲಕ ತೆಗೆದುಕೊಳ್ಳಲಾಗುತ್ತಿದೆ. 10 ಲಕ್ಷ ಸಸಿಗಳು ನಾಟಿ ಮಾಡಲು ಸಿದ್ಧವಾಗಿವೆ. ಇನ್ನೂ ಕೂಡ ಸಸಿಗಳ ಬೆಳೆಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಹೀಗಾಗಿ ಕೋಟಿ ವೃಕ್ಷಕ್ಕೆ ನಾನಾ ಬಗೆಯ ಸಸಿಗಳನ್ನು ಬೆಳೆಸುವ ಗುರಿ ಹಾಕಿಕೊಳ್ಳಲಾಗಿದೆ. ಈ ವರ್ಷ ಅಂತ್ಯದೊಳಗೆ 20 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ಸಿಇಓ ದರ್ಶನ್ ಎಚ್.ವಿ ತಿಳಿಸಿದ್ದಾರೆ.
ಬೆಳಗಾವಿಯ ಜಿಲ್ಲೆಯ ಎಲ್ಲೆಲ್ಲಿ ಸಸಿಗಳನ್ನ ನೆಡಲಾಗುತ್ತೆ:
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳನ್ನು ಗುರುತಿಸಿ ಮುಂಗಡ ಗುಂಡಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಅರಣ್ಯ ಹಾಗೂ ಗೈರಾಣ ಜಮೀನು, ಶಾಲೆಗಳ ಆವರಣ, ಸರ್ಕಾರಿ ಕಚೇರಿಗಳ ಆವರಣ, ಕಾಲುವೆಗಳ ಬದಿ ಮತ್ತು ಹಳ್ಳ-ಕೊಳ್ಳಗಳ ಬದಿಗಳಲ್ಲಿ ನೆಡಲು ಸ್ಥಳ ಗುರಿತಿಸಲಾಗಿದೆ. ಇದಲ್ಲದೇ ನರೇಗಾ ಯೋಜನೆಯಡಿ ಅರಣ್ಯ ಇಲಾಖೆಗೆ ಒಳಪಡುವ ಜಮೀನಿನಲ್ಲಿ ಸಸಿಗಳ ಬೆಳೆಸಿ ಮಾದರಿ ಉದ್ಯಾನವನಗಳು, ನೆಡುತೋಪುಗಳನ್ನು ನಿರ್ಮಾಣ ಮಾಡುವ ಯೋಜನೆಗಳನ್ನು ರೂಪಿಸಲಾಗಿದೆ.
ಇತ್ತ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಮೀನಿನಲ್ಲಿ ಬದುಗಳ ಮೇಲೆ ರೈತರಿಗೆ ಆದಾಯ ತಂದುಕೊಡುವ ಪೇರು, ನೆರಳೆ, ಸಪೋಟಾ ಸೇರಿದಂತೆ ಅನೇಕ ರೀತಿಯ ತೋಟಗಾರಿಕೆ ಸಸಿಗಳನ್ನು ಬೆಳೆಸಲಾಗುವುದು. ಇದಕ್ಕಾಗಿ ಈಗಾಗಲೇ ಸಸಿಗಳು ಸಿದ್ಧವಾಗಿದ್ದು, ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. ಇದರೊಂದಿಗೆ ಜಮೀನಿನಲ್ಲಿ ನೀರು ಇಂಗಿಸುವುದರೊಂದಿಗೆ ಅಂತರ್ಜಲ ಹೆಚ್ಚಳ ಹಾಗೂ ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನವನ್ನೂ ಮಾಡಲಾಗುತ್ತಿದೆ ಎಂದು ಜಿಪಂ ಸಿಇಒ ದರ್ಶನ ಹೇಳಿದರು.