ಬೆಳಗಾವಿ: ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಗಡಿ ಜಿಲ್ಲೆ ಬೆಳಗಾವಿ ರಾಜ್ಯದಲ್ಲೇ ಎರಡನೇ ಸ್ಥಾನಕ್ಕೇರಿದೆ. ಇಷ್ಟು ದಿನ ಮೂರನೇ ಸ್ಥಾನದಲ್ಲಿದ್ದ ಕುಂದಾನಗರಿ ಇಂದು ಮೈಸೂರು ಜಿಲ್ಲೆಯನ್ನು ಹಿಂದಿಕ್ಕಿದೆ. ರಾಜಧಾನಿ ಬೆಂಗಳೂರು ನಂತರ ಅತಿ ಹೆಚ್ಚು ಸೋಂಕಿತರು ಬೆಳಗಾವಿ ಜಿಲ್ಲೆಯಲ್ಲಿದ್ದು ಸ್ಥಳೀಯರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ದೇಶದಲ್ಲೇ ಅತಿ ಹೆಚ್ಚು ಸೋಂಕಿತರಿರುವುದು ಮಹಾರಾಷ್ಟ್ರ ರಾಜ್ಯದಲ್ಲಿ. ಆದರೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯಲ್ಲಿ ಏಪ್ರಿಲ್ 4ರವರೆಗೆ ಒಬ್ಬರಲ್ಲೂ ಸೋಂಕು ಪತ್ತೆಯಾಗಿರಲಿಲ್ಲ. ಆದರೆ ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ಭಾಗವಹಿಸಿದ್ದ 91 ಮಂದಿ ಬೆಳಗಾವಿಗೆ ವಾಪಸ್ಸಾದ ನಂತರ 14 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು.
ಜಿಲ್ಲೆಯ ಹಿರೇಬಾಗೇವಾಡಿ, ಪಿರನವಾಡಿ, ಯಳ್ಳೂರು, ಬೆಳಗುಂದಿ, ಸಂಕೇಶ್ವರ್ ಹಾಗೂ ಕುಡಚಿ ಪಟ್ಟಣದಲ್ಲಿ ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದವರಿಗೆ ಸೋಂಕು ದೃಢಪಟ್ಟಿತ್ತು. ನಿನ್ನೆಯವರೆಗಿನ ಮಾಹಿತಿ ಪ್ರಕಾರ ಈ 14 ಸೋಂಕಿತರ ಸಂಪರ್ಕ ಹೊಂದಿದ್ದ ಜಿಲ್ಲೆಯ 83 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಬಿಡುಗಡೆಯಾದ ಕೊರೊನಾ ಬುಲೆಟಿನ್ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 22 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಹೀಗಾಗಿ ಸೋಂಕಿತರ ಪಟ್ಟಿಯಲ್ಲಿ ಬೆಳಗಾವಿ ಎರಡನೇ ಸ್ಥಾನ ತಲುಪಿದೆ.