ಬೆಳಗಾವಿ : ಕೊರೊನಾ ಸೋಂಕಿತನೋರ್ವ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ವೃದ್ಧ ತಾಯಿಗೆ ಮತ್ತು ತನಗೆ ಬೆಡ್ ಸೌಲಭ್ಯ ಪಡೆಯಲು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 2 ಗಂಟೆಗಳ ಕಾಲ ಕಾದು ಕುಳಿತಿರುವ ಘಟನೆ ನಡೆದಿದೆ.
ನಗರದ ಚೆನ್ನಮ್ಮ ವೃತ್ತದಲ್ಲಿರುವ ಬಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ಗಳ ಕೊರತೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳು ಬರುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಈ ಘಟನೆ ಕೂಡ ನಡೆದಿದೆ.
ಬೆಳಗಾವಿ ನಗರದ ಕೊರೊನಾ ಸೋಂಕಿತನೋರ್ವ ತನ್ನ ಪತ್ನಿಯನ್ನು ಅಡ್ಮಿಟ್ ಮಾಡಿ ತಾಯಿಗೆ ಬೆಡ್ ವ್ಯವಸ್ಥೆ ಮಾಡಲು ಹರಸಾಹಸ ಪಡುತ್ತಿದ್ದಾನೆ. ಪತ್ನಿ, ತಾಯಿ ಜೊತೆ ತನಗೂ ಕೋವಿಡ್ ಬಂದಿರುವ ಹಿನ್ನೆಲೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಪತ್ನಿಗೆ ಬೆಡ್ ಸಿಕ್ಕಿದೆ. ಆದ್ರೆ, ತಾಯಿ ಹಾಗೂ ಆತನಿಗೆ ಕಳೆದ ಎರಡು ಗಂಟೆಗಳಿಂದ ಬೆಡ್ ಸಿಕ್ಕಿಲ್ಲ.
ಆಸ್ಪತ್ರೆಯವರೂ ಬೆಡ್ ಕೊಡುವುದಾಗಿ ಹೇಳಿದ್ದರೂ ಸಹ ಸ್ವಲ್ಪ ತಡವಾಗಲಿದೆ ಎಂದು ಹೇಳಿದ್ದಾರೆ. ಇದಲ್ಲದೆ ಮತ್ತೊಂದೆಡೆ ತುರ್ತು ಚಿಕಿತ್ಸಾ ವಿಭಾಗದಿಂದ ಬೇರೆ ಕಟ್ಟಡಕ್ಕೆ ಸೋಂಕಿತರನ್ನು ಶಿಫ್ಟ್ ಮಾಡುತ್ತಿದ್ದು, ಒಂದೇ ಆ್ಯಂಬುಲೆನ್ಸ್‌ನಲ್ಲಿ ಕುರಿಗಳನ್ನು ತುಂಬಿದ ಹಾಗೆಯೇ ಸೋಂಕಿತರನ್ನು ಕೂರಿಸಿ ಶಿಫ್ಟ್ ಮಾಡುತ್ತಿದ್ದಾರೆ.
ಅದರಲ್ಲಿ ಬೈಲಹೊಂಗಲ ಮೂಲದ ಮಹಾಂತೇಶ್ ಎಂಬುವರು ಬೇರೆ ಕಟ್ಟಡದೊಳಗೆ ತೆಗೆದುಕೊಂಡು ಹೋಗುವಷ್ಟರಲ್ಲೇ ಪ್ರಾಣಬಿಟ್ಟಿದ್ದಾರೆ. ಹೀಗಾಗಿ, ಬಿಮ್ಸ್ ಸಿಬ್ಬಂದಿ ಬೇಜವಾಬ್ದಾರಿಯಿಂದ ಮತ್ತಷ್ಟು ಕೊರೊನಾ ಹರಡುವ ಆತಂಕ ಎದುರಾಗಿದೆ.