ಬೆಳಗಾವಿ: ರಾಯಣ್ಣ ಪುತ್ಥಳಿ ಮರುಸ್ಥಾಪನೆ ವಿವಾದ ಅಂತ್ಯಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಕಾನೂನು ಸುವ್ಯವಸ್ಥೆ ಎಡಿಜಿಪಿ ಡಾ. ಅಮರ್ ಕುಮಾರ್ ಪಾಂಡೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪೀರನವಾಡಿಯ ಲಕ್ಷ್ಮಿ ಮಂಗಳ ಕಾರ್ಯಾಲಯದಲ್ಲಿ ನಡೆದ ಸಂಧಾನ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಸ್ಥಳೀಯರಿಂದಲೇ ವಿವಾದ ಇತ್ಯರ್ಥವಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಎರಡೂ ಬಣದ ಮುಖಂಡರ ಜೊತೆಗೆ ಸುದೀರ್ಘ ಸಭೆ ನಡೆಸಿ, ಅವರ ಸಲಹೆ, ಇಚ್ಛೆಯಂತೆ ಮಾಹಿತಿ ಸಂಗ್ರಹಿಸಿ ವಿವಾದಕ್ಕೆ ಅಂತ್ಯ ಹಾಡಲಾಗಿದೆ ಎಂದರು.
ಸದ್ಯದ ಜಾಗದಲ್ಲೇ ಸಂಗೊಳ್ಳಿ ರಾಯಣ್ಣ ಪುತ್ಥಳಿ ಇರಬೇಕು ಹಾಗೂ ವೃತ್ತಕ್ಕೆ ಶಿವಾಜಿ ಚೌಕ್ ಎಂದು ಹೆಸರಿಡಬೇಕು ಎಂದು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಉಭಯ ಬಣಗಳ ನಾಯಕರೇ ಈ ನಿರ್ಣಯ ಕೈಗೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿ ಬಳಿಕ ಉಭಯ ಬಣಗಳ ನಾಯಕರು ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿ ವಿವಾದಕ್ಕೆ ಅಂತ್ಯ ಹಾಡಿದರು.