ಅಥಣಿ(ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ 7ನೇ ಮತ್ತು 17ನೇ ನಂಬರ್ ವಾರ್ಡ್ನಲ್ಲಿ ಅನಧಿಕೃತವಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಬಂದ ಯುವಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ವಾರ್ಡ್ಗಳಲ್ಲಿ ಕ್ಯಾಮೆರಾ ಅಳವಡಿಸುವ ವಿರುದ್ಧ ಮಹಿಳೆಯರು ಆಕ್ರೋಶ ಹೊರ ಹಾಕಿದರು. ವಾರ್ಡ್ಗಳಲ್ಲಿ ಮೂಲಸೌಕರ್ಯಗಳು ಇಲ್ಲದೇ ಇರುವುದರಿಂದ ನಮ್ಮ ಖಾಸಗಿ ವ್ಯಕ್ತಿತ್ವಕ್ಕೆ ಹಾನಿ ಸಂಭವಿಸುತ್ತದೆ. ಹಾಗಾಗಿ, ಕ್ಯಾಮೆರಾಗಳನ್ನು ಅಳವಡಿಸದಂತೆ ಮಹಿಳೆಯರು ತೀವ್ರವಾಗಿ ಆಕ್ರೋಶ ಹೊರ ಹಾಕಿದರು.
ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಸಿಸಿ ಕ್ಯಾಮೆರಾ ಅಳವಡಿಸಲು ಬಂದ ಯುವಕರು ಸ್ಥಳದಲ್ಲೇ ಕ್ಯಾಮೆರಾ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸ್ಥಳೀಯರಿಂದ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಅಥಣಿ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ್ ಪಾಟೀಲ್ ಹಾಗೂ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರನ್ನು ಸಮಾಧಾನಗೊಳಿಸಿದರು.
ಇದನ್ನೂ ಓದಿ: ಅಮಾಯಕರನ್ನ ಮತಾಂತರ ಮಾಡೋದನ್ನ ತಡೆಯೋದು ಈ ಕಾಯ್ದೆಯ ಉದ್ದೇಶ : ಸಚಿವ ಮಾಧುಸ್ವಾಮಿ
ಯಾರೋ ಕಿಡಿಗೇಡಿಗಳು ಅನಧಿಕೃತವಾಗಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾದ ವಿಚಾರ ತಿಳಿದ ಅಧಿಕಾರಿಗಳು ಪುರಸಭೆ ಇಲಾಖೆಯ ಸಿಬ್ಬಂದಿಯನ್ನು ಕರೆಸಿ, ಕ್ಯಾಮೆರಾ ತೆರವುಗೊಳಿಸಿದರು. ಯಾವ ಉದ್ದೇಶಕ್ಕಾಗಿ ಅಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದ್ದರು ಎಂಬ ವಿಚಾರ ಅಥಣಿ ಪೊಲೀಸರ ತನಿಖೆಯಿಂದ ಹೊರ ಬರಬೇಕಾಗಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.