ಅಥಣಿ: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಯಥಾಸ್ಥಿತಿ ಕಾಪಾಡುವಂತಹ ಹೇಳಿಕೆ ನೀಡಿದ ಹಿನ್ನೆಲೆ ಪಂಚಮಸಾಲಿ ಸಮಾಜದ ಮುಖಂಡರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಥಣಿ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ರಮೇಶಗೌಡ ಪಾಟೀಲ್ ಹಾಗೂ ಈರಪ್ಪ ಬಿರಾದಾರ ಮಾತನಾಡಿ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರು ಸಿಎಂ ಎದುರಿನಲ್ಲಿ ಯಥಾಸ್ಥಿತಿ ಮುಂದುವರೆಸುವಂತೆ ನೀಡಿದ ಅಭಿಪ್ರಾಯ ಖಂಡಿಸುತ್ತೇವೆ. ಈ ಹೇಳಿಕೆಯನ್ನು ಹಿಂಪಡೆದು ಪಂಚಮಸಾಲಿ ಸಮಾಜದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ನಾವು ಗಾಣಿಗ ಸಮಾಜದ ಹಾಗೂ ಬಣಜಿಗ ಸಮಾಜದ 2ಎ ಮೀಸಲಾತಿ ಪಟ್ಟಿಗೆ ಸೇರುವ ಸಂದರ್ಭದಲ್ಲಿ ಯಾವುದೇ ಅಡ್ಡಿಪಡಿಸಿಲ್ಲ. ಡಿಸಿಎಂ ಲಕ್ಷ್ಮಣ್ ಸವದಿ ಅವರು ಕಳೆದ ಬೆಳಗಾವಿ ಪ್ರತಿಭಟನೆ ವೇಳೆ ಭರವಸೆ ಮಾತುಗಳನ್ನು ಹೇಳಿದಿರಿ. ಸದ್ಯದ ನಿಮ್ಮ ನಿಲುವು ಅಸಮಾಧಾನ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದಲ್ಲಿ ನಮಗೆ ಸಿಗಬೇಕಾದ ಹಕ್ಕನ್ನು ನಮಗೆ ನೀಡಿ ಎಂದು ಒತ್ತಾಯಿಸಿದರು.