ಬೆಳಗಾವಿ: ಸೇವಾ ಭದ್ರತೆ ಹಾಗೂ ಡಿ ದರ್ಜೆ ನೌಕರರನ್ನಾಗಿ ಮಾಡುವಂತೆ ಪೊಲೀಸ್ ಠಾಣೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತಾ ಕೆಲಸ ಮಾಡುವ ಜಾಡಮಾಲಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೋವಿಡ್-19ನಲ್ಲೂ ಜೀವದ ಹಂಗು ತೊರೆದು ಪೊಲೀಸ್ ಠಾಣೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆಯಾದರೂ ಕಳೆದ ಮೂರು ತಿಂಗಳಿಂದ ಸಂಬಳ ನೀಡುತ್ತಿಲ್ಲ. ಇಂತಹ ಸಮಯದಲ್ಲಿ ಕುಟುಂಬ ನಿರ್ವಹಣೆ ಮತ್ತಷ್ಟು ಕಷ್ಟವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಜಿಲ್ಲೆಯಲ್ಲಿ100 ಕ್ಕೂ ಹೆಚ್ಚು ಜಾಡಮಾಲಿಗಳು ಲಾಕ್ಡೌನ್ನಲ್ಲಿಯೂ ಸರ್ಕಾರಿ ಕಚೇರಿಗಳ ಸ್ವಚ್ಛತೆಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದರೂ ಯಾವುದೇ ಮಾಸ್ಕ್, ಸ್ಯಾನಿಟೈಸರ್ಗಳನ್ನು ಸರ್ಕಾರ ನಮಗೆ ನೀಡುತ್ತಿಲ್ಲ.
ನಮಗೆ ಕೊರೊನಾ ತಗುಲಿ ಏನಾದರೂ ಹೆಚ್ಚೂಕಮ್ಮಿ ಆದರೂ ನಮ್ಮ ಕುಟುಂಬಗಳು ಬೀದಿಪಾಲಾಗಲಿವೆ. ಹೀಗಾಗಿ ಸರ್ಕಾರ ನಮಗೂ ಕೂಡ ಸಪಾಯಿ ಕರ್ಮಚಾರಿಗಳಂತೆ ವಿಮೆ ಸೌಲಭ್ಯ ಒದಗಿಸಬೇಕು. ಇನ್ನು ಕಳೆದ 30 ವರ್ಷದಿಂದ ಕೇವಲ 3,500 ಸಂಬಳ ಪಡೆದುಕೊಂಡು ಜೀವನ ನಡೆಸಲಾಗುತ್ತಿದೆ.
ಇದರಿಂದ ಈಗ ಜೀವನ ನಡೆಸುವುದು ಕಷ್ಟಕರವಾಗಿದ್ದು, ಕನಿಷ್ಟ ವೇತನ, ಸೇವಾ ಭದ್ರತೆ ಹಾಗೂ ಡಿ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು. ಈ ಕುರಿತು ಹಲವು ಬಾರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನಮ್ಮನ್ನು ಡಿ ದರ್ಜೆ ನೌಕರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.