ಬೆಳಗಾವಿ : ತರಾತುರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧೇಯಕ ಮಂಡನೆ ಆಗಿ ಕೆಲವೇ ಕ್ಷಣಗಳಲ್ಲಿ ಅದರ ಪ್ರತಿಯನ್ನೇ ಹರಿದು ಹಾಕಿ ಆಕ್ರೋಶ ಹೊರ ಹಾಕಿದರು.
ಸರ್ಕಾರ ಕದ್ದುಮುಚ್ಚಿ ವಿಧೇಯಕ ಮಂಡಿಸಿದೆ. ಈ ವಿಧೇಯಕ ಮಂಡಿಸಲು ಅನುಮತಿ ನೀಡುತ್ತಿರಲಿಲ್ಲ. ಈ ವಿಧೇಯಕ ನಮಗೆ ಬೇಡವೇ ಬೇಡ ಎಂದು ಡಿಕೆಶಿ ವಿಧೇಯಕದ ಪ್ರತಿಯನ್ನೇ ಹರಿದು ಆಡಳಿತ ಪಕ್ಷದ ನಾಯಕರ ಕಡೆಗೆ ಎಸೆದರು. ಹಿರಿಯರಾಗಿ ನೀವು ವಿಧೇಯಕದ ಪ್ರತಿಯನ್ನು ಹರಿಯಬಾರದಿತ್ತು ಎಂದು ಸ್ಪೀಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಸರ್ಕಾರದ ನೀತಿಯನ್ನು ಕೆಲ ಹೊತ್ತು ಕಾಂಗ್ರೆಸ್ ನಾಯಕರು ಟೀಕಿಸಿದರು.
ಹಲವರು ಅನುಪಸ್ಥಿತಿಯಲ್ಲಿ ವಿಧೇಯಕ ಮಂಡನೆ : ಭೋಜನದ ವಿರಾಮದ ಬಳಿಕ ಮತಾಂತರ ನಿಷೇಧ ವಿಧೇಯಕ ಮಂಡಿಸಲಾಯಿತು. ಈ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜೊತೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಎಂ.ಬಿ.ಪಾಟೀಲ ಸೇರಿದಂತೆ ಘಟಾನುಘಟಿ ನಾಯಕರ ಅನುಪಸ್ಥಿತಿಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ವಿಧೇಯಕವನ್ನು ಮಂಡಿಸಿದರು. ವಿಧೇಯಕ ಮಂಡನೆ ವೇಳೆ ಸಕಾರ ನಡೆದುಕೊಂಡ ರೀತಿ ಪ್ರತಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಯಿತು.
(ಇದನ್ನೂ ಓದಿ: ವಿಪಕ್ಷಗಳ ವಿರೋಧದ ನಡುವೆ ಮತಾಂತರ ನಿಷೇಧ ವಿಧೇಯಕ ಮಂಡನೆ... ಮಸೂದೆಯಲ್ಲಿರುವ ಪ್ರಮುಖಾಂಶಗಳೇನು?)
ಕಾಂಗ್ರೆಸ್ ಸಭಾತ್ಯಾಗ : ಮತಾಂತರ ನಿಷೇಧ ವಿಧೇಯಕ ಜಾರಿಗೆ ನಮ್ಮ ವಿರೋಧವಿದೆ. ವಿಧೇಯಕವೇನೋ ಈಗ ಮಂಡನೆ ಆಗಿದೆ. ಆದರೆ, ಮತಾಂತರ ನಿಷೇಧ ವಿಧೇಯಕ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು. ಪ್ರಶ್ನೋತ್ತರ ಅವಧಿ ಬಳಿಕ ನಾಳೆ ಈ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತೇವೆ ಎಂದು ಸ್ಪೀಕರ್ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ನಾಳೆ, ನಾಡಿದ್ದು ಉಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಕೊನೆಯ ದಿನ ಈ ಕಾಯ್ದೆ ಬಗ್ಗೆ ಚರ್ಚೆಗೆ ಸಮಯ ನೀಡಬೇಕು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ಏನಾಯಿತು? ಒಂದೂ ಗೋಶಾಲೆ ಆರಂಭವಾಗಲಿಲ್ಲ. ಗೋಶಾಲೆಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ.
ಈ ಕಾಯ್ದೆ ಜಾರಿಯಿಂದ ಜಗತ್ತೇನು ಮುಳುಗುವುದಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಮೊದಲ ಆದ್ಯತೆ ನೀಡಬೇಕು ಎಂದರು. ಈ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಸ್ಪೀಕರ್ ಹೇಳಿದರು. ನಂತರ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ವಾಗ್ವಾದ ಹೆಚ್ಚಾದ ಪರಿಣಾಮ ಸರ್ಕಾರ ನಿರ್ಧಾರ ಖಂಡಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.