ಚಿಕ್ಕೋಡಿ: ಲಾಕ್‍ಡೌನ್‍ನಿಂದ ಕಂಗೆಟ್ಟಿರುವ ಬಡ, ಕೂಲಿ ಹಾಗೂ ನಿರ್ಗತಿಕರ ಕುಟುಂಬಗಳ ನೆರವಿಗೆ ಧಾವಿಸಿರುವ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಮನೆಯನ್ನೇ ಅಡವಿಟ್ಟಿದ್ದಾರೆ. ತನ್ಮೂಲಕ ಈ ಗ್ರಾ.ಪಂ. ಸದಸ್ಯ ಇತರೆ ಚುನಾಯಿತ ಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗವನಾಳ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ ವ್ಯಾಪಾರಿ ಅವರು ತಮ್ಮ ಮನೆಯ ಮೇಲೆ ಸಾಲ ಮಾಡಿ ಬಡವರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದ್ದಾರೆ. ಬಡವರಲ್ಲಿ ಆತ್ಮಸ್ಥೈರ್ಯ ತುಂಬಿದ ಈ ಪಂಚಾಯತ್ ಸದಸ್ಯನ ಕಾರ್ಯವೈಖರಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
2ನೇ ಬಾರಿ ಲಾಕ್‍ಡೌನ್ ಹೇರಿದರೂ ಈವರೆಗೂ ಕ್ಷೇತ್ರದ ಸಂಸದ, ಶಾಸಕರು ಗ್ರಾಮದತ್ತ ಸುಳಿಯುತ್ತಿಲ್ಲ. ಜೊತೆಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಿಲ್ಲ. ಇದರಿಂದ ಅನೇಕ ಬಡ ಕುಟುಂಬಗಳ ಹಸಿದ ಹೊಟ್ಟೆಗೆ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿತ್ತು.
ಇದನ್ನು ಗಮನಿಸಿದ ಗ್ರಾಪಂ ಸದಸ್ಯ ಶ್ರೀನಿವಾಸ ವ್ಯಾಪಾರಿ ಅವರು ತಮ್ಮ ಮನೆಯನ್ನೇ ಅಡವಿಟ್ಟು ₹ 40 ಸಾವಿರ ಮೌಲ್ಯದ ವಿವಿಧ ದಿನಸಿ ವಸ್ತುಗಳನ್ನು ವಿತರಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದವರಿಗೆ ಸ್ಪಂದಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.