ಬೆಳಗಾವಿ: ಸಾರ್ವಜನಿಕರ ತೆರಿಗೆ ಹಣದಲ್ಲಿ ರಾಜ್ಯದ ರಾಜ್ಯಪಾಲರು ದರ್ಬಾರ್ ನಡೆಸುತ್ತಿದ್ದು, ರಾಜಭವನದ ಉದ್ಯಾನ ನಿರ್ವಹಣೆಗೆ 2014ರಿಂದ 2017ರ ಅವಧಿಯಲ್ಲಿ 3ಕೋಟಿ 27 ಲಕ್ಷ ರೂ.ಗಳ ದುಂದು ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಸಾರ್ವಜನಿಕರ ತೆರಿಗೆ ಹಣವನ್ನು ಐಷಾರಾಮಿ ಜೀವನ ನಡೆಸಲು ಬಳಸಿಕೊಂಡಿರುವುದು ಸ್ಪಷ್ಟವಾಗಿದೆ. ರಾಜಭವನದ ಅಧಿಕಾರಿಗಳು ಬ್ರಿಟಿಷ್ ಸರಕಾರದ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದು, ಅಂಥವರ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
2014 ರಿಂದ 2017ರ ನಡುವಿನ ಅವಧಿಯಲ್ಲಿ ರಾಜ್ಯಪಾಲರ ಉದ್ಯಾನ ನಿರ್ವಹಣೆಗೆ 3.27 ಕೋಟಿ ರೂ. ಖರ್ಚಾಗಿರುವ ಮಾಹಿತಿ ನೀಡಲಾಗಿದೆ. ರಾಜಭವನದ ಡೈನಿಂಗ್ ಹಾಲ್, ಪ್ರಧಾನ ಕಚೇರಿ, ಗಣ್ಯ ವ್ಯಕ್ತಿಗಳ ಕೊಠಡಿಗಳಲ್ಲಿ ಅಲಂಕಾರಕ್ಕಾಗಿ ಅವಶ್ಯ ಇರುವ ಬಿಡಿ ಹೂಗಳನ್ನು ಖರೀದಿಸಲು ಬೇಕಾಬಿಟ್ಟಿ ಹಣ ಖರ್ಚು ಮಾಡಲಾಗಿದೆ.
ಆದರೆ, 2014ರಲ್ಲಿ ರಾಜ್ಯಪಾಲರಾಗಿ ನೇಮಕಗೊಂಡ ವಜೂಭಾಯಿ ವಾಲಾ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೇ ಯಾರಿಗೂ ಭೇಟಿಯಾಗಲು ಅವಕಾಶ ನೀಡದೇ ಇದ್ದರೂ ಸಾರ್ವಜನಿಕರ ತೆರಿಗೆ ಹಣದಲ್ಲಿ ವ್ಯಯಿಸಿದ್ದಾರೆ. ಹೀಗಾಗಿ ಸಮಗ್ರ ತನಿಖೆ ನಡೆಸಿ ಭಾಗಿಯಾಗಿದ್ದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.