ಬೆಳಗಾವಿ : ಚಳಿಗಾಳದ ಅಧಿವೇಶನ ಹಾಗೂ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಡಿಸೆಂಬರ್ 22ರ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ವಿಸ್ತರಿಸಿ ಮಹಾನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.
ಬೆಳಗಾವಿಯಲ್ಲಿ ಸಾಲು ಸಾಲು ಪ್ರತಿಭಟನೆ ಹಿನ್ನೆಲೆ ಬೆಳಗಾವಿ ನಗರ ಹಾಗೂ ತಾಲೂಕಿನಾದ್ಯಂತ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದೆ. ಈ ಮೊದಲು ಸೋಮವಾರ ಬೆಳಗ್ಗೆ 6ಗಂಟೆವರೆಗೂ ಮಾತ್ರ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಡಿಸೆಂಬರ್ 22ರ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ.
ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧ ಚಲೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ರಾಜ್ಯದ ನಾನಾ ಭಾಗದಿಂದ ಸಾವಿರಾರು ಕಾರ್ಯಕರ್ತರು ಬೆಳಗಾವಿಗೆ ಆಗಮಿಸುತ್ತಿದ್ದಾರೆ.
ಇತ್ತ ಮತ್ತೊಂದೆಡೆ ಬಾರುಕೋಲು ಚಳವಳಿಗೆ ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿರುವ ಬೃಹತ್ ಪ್ರತಿಭಟನಾ ರ್ಯಾಲಿ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧವರೆಗೆ ಹೊರಡಲಿದೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷ ಕೂಡ ಪ್ರತಿಭಟನಾ ರ್ಯಾಲಿ ಮಾಡುವ ಸಾಧ್ಯತೆ ಇದೆ.
ಸದ್ಯ ವಿವಿಧ ಸಂಘಟನೆಗಳು ಪ್ರತಿಭಟನೆ, ಮೆರವಣಿಗೆ ನಡೆಸಲು ಮುಂದಾಗಿದ್ದರಿಂದ ಅಧಿವೇಶನ ಹಾಗೂ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದೆ.
(ಇದನ್ನೂ ಓದಿ: ಚಿಕ್ಕಬಳ್ಳಾಪುರ: ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ, ಬಾಲಕ ಸಾವು)